ನೀರು ತುಂಬಿದ್ದ ಗುಂಡಿಯಲ್ಲಿ ಬಿದ್ದು ಮಕ್ಕಳ ದಾರುಣ ಸಾವು
ನೀರು ತುಂಬಿದ್ದ ಗುಂಡಿಯಲ್ಲಿ ಈಜಾಡಲು ಹೋದ ಮೂವರು ಬಾಲಕರು ದುರ್ಮರಣ ಹೊಂದಿರುವ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.
ಕಲಬುರ್ಗಿ ನಗರದ ಮಹಾಲಕ್ಷ್ಮೀ ಲೇಔಟ್ ನಲ್ಲಿ ಮನೆ ನಿರ್ಮಾಣಕ್ಕಾಗಿ ವ್ಯಕ್ತಿಯೊಬ್ಬರು ಗುಂಡಿ ತೆಗೆದಿದ್ದರು. ಇಂತಹ ಗುಂಡಿಗೆ ಕಳೆದ ರಾತ್ರಿ ಸುರಿದಂತ ಭಾರಿ ಮಳೆಯಿಂದ ನೀರು ತುಂಬಿ, ಭರ್ತಿಯಾಗಿದ್ದವು. ನೀರಿನ ಆಳ ತಿಳಿಯದೆ ಆಟ ಆಡಲು ಹೋದ ಬಾಲಕರು ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.
ಮೃತರನ್ನು ದರ್ಶನ್ (12), ಪ್ರಶಾಂತ್ (10) ಹಾಗು ವಿಘ್ನೇಶ್ (9) ಎಂದು ಗುರುತಿಸಲಾಗಿದೆ. ಮನೆ ಕಟ್ಟುವುದಕ್ಕೆ ಕಾಲಮ್ ಹಾಕಿ ತಗ್ಗು ತೋಡಲಾಗಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ತಗ್ಗುಗುಂಡಿ ಜಲಾವೃತವಾಗಿತ್ತು.
ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ನ್ಯೂ ರಾಘವೇಂದ್ರ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








