ಪೇಪರ್ ಓದಬೇಡ. ಸೋಷಿಯಲ್ ಮೀಡಿಯಾದಿಂದ ಸಾಧ್ಯವಾದಷ್ಟು ದೂರು ಇರು. ಇದು ನಿನ್ನ ಒಳ್ಳೆಯದಕ್ಕೆ.. ಹಾಗಂತ ಹೇಳಿದ್ದು ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ.
ಹಾಗಿದ್ರೆ ಧೋನಿ ಈ ಸಲಹೆ ಕೊಟ್ಟಿದ್ದು ಯಾರಿಗೆ ಅಂತಿರಾ ? ಭಾರತ ಎ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ. ಅದು 2017. ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ಆಯ್ಕೆಯಾಗಿದ್ದರು. ಟೀಮ್ ಇಂಡಿಯಾದ ಡ್ರೆಸಿಂಗ್ ರೂಂಗೆ ಎಂಟ್ರಿಯಾದಾಗ ಶ್ರೇಯಸ್ ಅಯ್ಯರ್ ಖುಷಿಗೆ ಪಾರವೇ ಇರಲಿಲ್ಲ. ಯಾಕಂದ್ರೆ ಬಹುದಿನಗಳ ಕನಸು ಸಾಕಾರಗೊಂಡ ಕ್ಷಣ ಅದಾಗಿತ್ತು. ಟೀಮ್ ಇಂಡಿಯಾದಲ್ಲಿ ಆಡಬೇಕು ಅನ್ನೋ ಮಹಾದಾಸೆಯಲ್ಲಿದ್ದ ಶ್ರೇಯಸ್ ಅಯ್ಯರ್ಗೆ ಅವತ್ತು ಜಗತ್ತನ್ನೇ ಗೆದ್ದ ಖುಷಿಯಲ್ಲಿದ್ದರು.

ಅಷ್ಟೇ ಅಲ್ಲ, ಶ್ರೇಯಸ್ ಡ್ರೆಸಿಂಗ್ ರೂಂಗೆ ಎಂಟ್ರಿಯಾದಗ ಮೊದಲು ಭೇಟಿಯಾಗಿದ್ದು ಮಹೇಂದ್ರ ಸಿಂಗ್ ಅವರನ್ನು. ಯಾಕಂದ್ರೆ ಧೋನಿ, ಶ್ರೇಯಸ್ ಅಯ್ಯರ್ಗೆ ರೋಲ್ ಮಾಡೆಲ್ ಆಗಿದ್ದರು. ಧೋನಿಯಂತೆ ತಾನು ಕ್ರಿಕೆಟಿಗನಾಗಬೇಕು ಅನ್ನೋ ಆಸೆಯನ್ನು ಹೊಂದಿದ್ದರು. ಧೋನಿಯ ನಾಯಕತ್ವ ಗುಣಗಳನ್ನು ಶ್ರೇಯಸ್ ಅಯ್ಯರ್ ಮೈಗೂಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಇದೀಗ ಶ್ರೇಯಸ್ ಅಯ್ಯರ್ ಭಾರತ ಎ ತಂಡದ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಹೀಗೆ ಡ್ರೆಸಿಂಗ್ ರೂಂನಲ್ಲಿ ಧೋನಿಯವರನ್ನು ಭೇಟಿ ಮಾಡಿದಾಗ ಶ್ರೇಯಸ್ ಅಯ್ಯರ್ಗೆ ಏನು ಹೇಳಬೇಕು, ಏನು ಮಾಡಬೇಕು ಎಂಬುದೇ ಗೊತ್ತಾಗಲಿಲ್ಲ. ಆದ್ರೆ ಧೋನಿ ಹಿರಿಯ ಕ್ರಿಕೆಟಿಗ ಎಂಬ ಅಹಂ ಅನ್ನು ಬಿಟ್ಟು ಶ್ರೇಯಸ್ಗೆ ಸಲಹೆ, ಮಾರ್ಗದರ್ಶನಗಳನ್ನು ನೀಡಿದ್ದರು. ಅಯ್ಯರ್ಗೆ ಮೊದಲು ನ್ಯೂಸ್ ಪೇಪರ್ಗಳನ್ನು ಓದಬೇಡ. ಸಾಧ್ಯವಾದಷ್ಟು ಸೋಷಿಯಲ್ ಮೀಡಿಯಾದಿಂದ ದೂರ ಇರು ಅಂತ ಹೇಳಿದಾಗ ಅಯ್ಯರ್ಗೆ ಅಚ್ಚರಿಯಾಗಿತ್ತು. ನಂತರ ಧೋನಿ ಯಾಕೆ ಹೇಳಿದ್ರು ಎಂಬುದು ಕೂಡ ಮನವರಿಕೆಯಾಯ್ತು. ನ್ಯೂಸ್ ಪೇಪರ್ಗಳಲ್ಲಿ ಬರುವಂತಹ ಟೀಕೆಗಳು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತೆ. ಹಾಗೇ ಸೋಷಿಯಲ್ ಮೀಡಿಯಾದಲ್ಲಿದ್ರೆ ಏಕಾಗ್ರತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತೆ. ಆಟದ ಮೇಲೆ ಆಸಕ್ತಿ ಕಡಿಮೆಯಾಗಬಹುದು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಧೋನಿ ಶ್ರೇಯಸ್ ಅಯ್ಯರ್ಗೆ ಸಲಹೆ ನೀಡಿದ್ದರು.








