ಕೊರೊನಾ ಲಾಕ್ ಡೌನ್ ವೇಳೆ ರಾಜ್ಯ ಬಿಟ್ಟು ಹೋದ ವಲಸೆ ಕಾರ್ಮಿಕರು ಇನ್ನೂವರೆಗೂ ವಾಪಸ್ ರಾಜ್ಯದತ್ತ ಮುಖ ಮಾಡಿಲ್ಲ. ಬೆಂಗಳೂರು ಸದ್ಯ ಕೊರೊನಾ ಹಾಟ್ ಸ್ಪಾಟ್ ಆಗಿ ಮಾರ್ಪಾಡಾಗಿರುವುದರಿಂದ ವಲಸೆ ಕಾರ್ಮಿಕರು ಸಿಲಿಕಾನ್ ಸಿಟಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ರೈಲ್ವೆ ಸೇರಿದಂತೆ ವಿವಿಧ ವಲಯಗಳಲ್ಲಿ ಕಾರ್ಮಿಕರ ಕೊರತೆ ಎದುರಾಗಿದೆ. ಇನ್ನೂ ಕಾರ್ಮಿಕರ ಕೊರತೆಯಿಂದಾಗಿ ರೈಲ್ವೆಯ ಹಲವು ಯೋಜನೆಗಳು ವಿಳಂಬವಾಗುತ್ತಿವೆ.
ಇತ್ತ ಜೋಡಿ ಹಳಿ ಕಾಮಗಾರಿಗಳು ಇನ್ನೂ 6 ತಿಂಗಳು ವಿಳಂಬವಾಗಬಹುದು ಎಂದು ಅಂದಾಜಿಸಲಾಗಿದೆ. ಶ್ರಮಿಕ್ ರೈಲಿನ ಮೂಲಕ ತವರು ರಾಜ್ಯಕ್ಕೆ ಹೋದ ವಲಸೆ ಕಾರ್ಮಿಕರು ಅಲ್ಲಿಯೇ ಕೆಲಸ ಹುಡುಕುತ್ತಿದ್ದಾರೆ.
ಮತ್ತೊಂದೆಡೆ ಕಾರ್ಮಿಕರು ವಾಪಸ್ ಬರಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಬೈಯಪ್ಪನಹಳ್ಳಿ ಕೋಚಿಂಗ್ ಟರ್ಮಿನಲ್, ಹುಬ್ಬಳ್ಳಿ ನಿಲ್ದಾಣ ಕಾಮಗಾರಿ, ಹುಬ್ಬಳ್ಳಿ-ಚಿಕ್ಕಜಾಜೂರು ಜೋಡಿ ಹಳಿ ಸೇರಿದಂತೆ ವಿವಿಧ ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವುದು ವಿಳಂಬವಾಗಲಿದೆ ಎನ್ನಲಾಗಿದೆ.








