ಷೇರು ಮಾರುಕಟ್ಟೆಯ ಬಿಗ್ ಬುಲ್
ಹರ್ಷದ್ ಮೆಹ್ತಾ ಸಾಮ್ರಾಜ್ಯ ಪತನಗೊಂಡಿದ್ದು ಹೇಗೆ ?
ಹರ್ಷದ್ ಶಾಂತಿಲಾಲ್ ಮೆಹ್ತಾ….!
ಈ ಹೆಸರು ಕೇಳಿದಾಗ ನೆನಪಾಗೋದು 1992ರ ಭಾರತೀಯ ಷೇರು ಮಾರುಕಟ್ಟೆಯ ಹಗರಣ. ಆಗಿನ 10ಸಾವಿರ ಕೋಟಿ ರೂಪಾಯಿಯ ಭಾರತದ ಅತೀ ದೊಡ್ಡ ಹಣಕಾಸಿನ ಹಗರಣದ ರೂವಾರಿ. ಹರ್ಷದ್ ಮೆಹ್ತಾ ಸಾವನ್ನಪ್ಪಿ 19 ವರ್ಷಗಳಾಗಿವೆ. ಆದ್ರೆ ಹರ್ಷದ್ ಮೆಹ್ತಾ ಹೆಸರು ಮಾತ್ರ ಇಂದಿಗೂ ಷೇರು ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿದೆ.
ಹೌದು..! ಹರ್ಷದ್ ಮೆಹ್ತಾ ಅವರನ್ನು ಷೇರು ಮಾರುಕಟ್ಟೆಯ ಬಾದ್ ಶಾ, ಬಾಂಬೆ ಷೇರು ಮಾರುಕಟ್ಟೆಯ ಅಮಿತಾಬ್ ಬಚ್ಚನ್.. ಬಿಗ್ ಬುಲ್.. 1992ರ ಹಣಕಾಸು ಹಗರಣದ ಕಿಂಗ್ ಪಿನ್ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತಿದೆ. ಈಗಾಗಲೇ ಹರ್ಷದ್ ಮೆಹ್ತಾ ಅವರ ಜೀವನಾಧರಿತ ಸಿನಿಮಾಗಳು ಬಂದಿವೆ. ಹಾಗೇ ಸದ್ಯ ದೊಡ್ಡ ಸುದ್ದಿಯಲ್ಲಿರುವುದು ಮೆಹ್ತಾ ಜೀವನಾಧರಿತ 10 ಸಂಚಿಕೆಗಳ ವೆಬ್ ಸಿರೀಸ್.
ಈ ವೆಬ್ ಸಿರೀಸ್ ಅನ್ನು ನೋಡಿದಾಗ ಹರ್ಷದ್ ಬೆಳೆದು ಬಂದ ರೀತಿ, ತಾನೇ ಕಟ್ಟಿದ್ದ ಸಾಮ್ರಾಜ್ಯವನ್ನು ನೋಡಿದಾಗ ಸ್ಪೂರ್ತಿಯಾಗುತ್ತಾರೆ. ಅದೇ ರೀತಿ ಮಧ್ಯಮ ವರ್ಗದ ವ್ಯಕ್ತಿಯೊಬ್ಬ ರಾಜಕೀಯ ಚದುರಂಗದಾಟಕ್ಕೆ ಹೇಗೆ ಬಲಿಯಾಗುತ್ತಾನೆ ಅನ್ನೋದು ಕೂಡ ಸ್ಪಷ್ಟವಾಗುತ್ತದೆ. ಇನ್ನೊಂದು ಕಡೆ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಲೋಪದೋಷಗಳು ಯಾವ ಮಟ್ಟದಲ್ಲಿವೆ ಎಂಬುದು ಕೂಡ ಗೋಚರವಾಗುತ್ತವೆ.
ಅಷ್ಟೇ ಅಲ್ಲ, ನಮ್ಮ ಕಾನೂನು ವ್ಯವಸ್ಥೆ ಮತ್ತು ತನಿಖಾ ಸಂಸ್ಥೆಗಳು ಕೈಗೊಂಬೆಗಳಾಗಿ ಕೆಲಸ ಮಾಡುತ್ತಿವೆ ಎಂಬುದು ಸಹ ಅರಿವಾಗುತ್ತಿದೆ. ಮತ್ತೊಂದೆಡೆ ಮಾಧ್ಯಮಗಳು ಒಬ್ಬ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಯಶಸ್ಸಿನ ಲೋಪವನ್ನೇ ಮುಂದಿಟ್ಟುಕೊಂಡು ಇಡೀ ಭಾರತೀಯ ಬ್ಯಾಂಕಿಂಗ್ ಮತ್ತು ಷೇರು ಮಾರುಕಟ್ಟೆಯ ವ್ಯವಸ್ಥೆಯನ್ನೇ ಬದಲಾಯಿಸುವ ಸಾಮಥ್ರ್ಯವಿದೆ ಎಂಬುದು ಕೂಡ ಸಾಬೀತಾಗುತ್ತದೆ.
ಅಷ್ಟಕ್ಕೂ ಯಾರು ಈ ಹರ್ಷದ್ ಮೆಹ್ತಾ.. ಷೇರು ಮಾರುಕಟ್ಟೆಯ ಆಗುಹೋಗುಗಳನ್ನು ತನ್ನ ಕೈ ಬೆರಳಿನಲ್ಲೇ ಆಡಿಸುತ್ತಿದ್ದದ್ದು ಹೇಗೆ ? ಷೇರು ಮಾರುಕಟ್ಟೆಯಲ್ಲಿ ಹೇಗೆ ದುಡ್ಡು ಸಂಪಾದಿಸಬಹುದು.. ? ಬ್ಯಾಂಕಿಂಗ್ ಮತ್ತು ಷೇರು ಮಾರುಕಟ್ಟೆಯ ಲೋಪದೋಷಗಳನ್ನೇ ಬಂಡವಾಳವನ್ನಾಗಿಸಿಕೊಂಡಿದ್ದು ಹೇಗೆ ?
ಹರ್ಷದ್ ಮೆಹ್ತಾ ನಿಜವಾಗಿಯೂ ತನ್ನ ಗ್ರಾಹಕರಿಗೆ ಮೋಸ ಮಾಡಿದ್ರಾ ? ಆಗಿನ ಪ್ರಧಾನ ಮಂತ್ರಿ ಮತ್ತು ಪ್ರಭಾವಿ ಸ್ವಾಮೀಜಿಯ ಕೃಪೆಯಿಂದಲೇ ಹರ್ಷದ್ ಮೆಹ್ತಾ ಈ ಮಟ್ಟಕ್ಕೆ ಬೆಳೆಯಲು ಕಾರಣವಾಯ್ತಾ ? ಹೀಗೆ ಹಲವಾರು ಪ್ರಶ್ನೆಗಳು ಮುಂದಾಗುತ್ತವೆ.
ಆದ್ರೆ ಒಬ್ಬ ಸಾಧಾರಣ ಷೇರು ಮಾರುಕಟ್ಟೆಯ ಮಧ್ಯವರ್ತಿಗೆ ಬ್ಯಾಂಕ್ ಗಳು ನೂರಾರು ಕೋಟಿ ರೂಪಾಯಿಗಳನ್ನು ಯಾವುದೇ ಭದ್ರತೆ ಇಲ್ಲದೆ ಕೊಟ್ಟಿರುವುದಾದ್ರೂ ಯಾಕೆ ?
ಅಬ್ಬಾ..ಇಂತಹ ಆಚರಣೆಗಳೂ ನಿಜಕ್ಕೂ ಇರುತ್ವಾ..! , ವಿಶ್ವದ ವಿಲಕ್ಷಣ ಆಚರಣೆಗಳು , ನಂಬಿಕೆಗಳು..!
ವಿದೇಶಿ ಬ್ಯಾಂಕ್ ಗಳು ಮಾಡುತ್ತಿದ್ದ ದಂಧೆಯ ವಿರುದ್ಧ ಹೋರಾಟ ನಡೆಸಿದ್ದು ತಪ್ಪಾ ? ತಪ್ಪು ಮಾಡಿ ಸಿಕ್ಕಿ ಬಿದ್ದ ನಂತರ ತನಿಖಾ ಸಂಸ್ಥೆಗಳ ಕಿರಿಕಿರಿ, ಷೇರು ಖರೀದಿ ಮಾಡಿದ್ದ ಗ್ರಾಹಕರ ಒತ್ತಡ, ಆಪ್ತರು ಮಾಡಿರುವ ವಂಚನೆ, ದಂಧೆಗೆ ಸಹಕರಿಸಿ, ಕೊನೆಗೆ ಕೈಕೊಟ್ಟ ಪ್ರಭಾವಿ ವ್ಯಕ್ತಿಗಳು..
ಹೀಗೆ ಗ್ರೋ ಮೋರ್ ಅಂತ ಗ್ರಾಹಕರನ್ನು ನಂಬಿಸಿ, ಸವಾಲುಗಳೇ ಇಷ್ಟೇ ಅಂತ ಹೇಳ್ತಾ ಒತ್ತಡ, ಖಿನ್ನತೆಗೆ ಒಳಗಾದ ಹರ್ಷದ್ ಮೆಹ್ತಾ ಹೃದಯಾಘಾತದಿಂದ ಡಿಸೆಂಬರ್ 31, 2001ರಂದು ನಿಧನರಾಗುತ್ತಾರೆ. 28 ವರ್ಷಗಳ ಹಿಂದಿನ ಹಗರಣದ ತನಿಖೆ ಈಗಲೂ ನಡೆಯುತ್ತಿದೆ. ಹರ್ಷದ್ ಮೆಹ್ತಾ ಅವರ ಪ್ರತಿ ಹೆಜ್ಜೆಯಲ್ಲೂ ಬೆನ್ನಲುಬಾಗಿದ್ದ ತಮ್ಮ ಅಶ್ವಿನ್ ಮೆಹ್ತಾ ಇದೀಗ ಪೂರ್ಣ ಪ್ರಮಾಣದ ವಕೀಲರಾಗಿ ಹರ್ಷದ್ ಮೆಹ್ತಾ ಹಗರಣದ ಕೇಸ್ ಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಸದ್ಯದ ದೇಶದಲ್ಲಿನ ಭ್ರಷ್ಟಚಾರಗಳು, ಉದ್ಯಮಿಗಳು ಬ್ಯಾಂಕ್ ಗಳಿಗೆ ಮಾಡಿರುವ ವಂಚನೆಗಳನ್ನು ನೋಡಿದಾಗ ಹರ್ಷದ್ ಮೆಹ್ತಾ ಅವರನ್ನು ಹೆಚ್ಚು ನಂಬಬಹುದು ಅನ್ನಿಸುತ್ತದೆ. ಗ್ರಾಹಕರಿಗೆ ಷೇರು ಮಾರುಕಟ್ಟೆಯಲ್ಲಿ ಲಾಭ ಮಾಡಿಕೊಟ್ಟು ಅವರದ್ದೇ ದುಡ್ಡಿನಲ್ಲಿ ಬೃಹತ್ ಸಾಮ್ರಾಜ್ಯ ಕಟ್ಟುವುದು ಅಂದ್ರೆ ಅದಕ್ಕೆ ಅಪ್ರತಿಮ ಬುದ್ಧಿವಂತಿಕೆ ಬೇಕು. ಅಷ್ಟೇ ಧೈರ್ಯವೂ ಬೇಕು.
ಹಾಗಂತ ಹರ್ಷದ್ ಮೆಹ್ತಾ ವಂಚನೆ ಆರೋಪ ಎದುರಿಸಿದ್ರೂ ಎಲ್ಲೂ ಕೂಡ ಓಡಿ ಹೋಗಲಿಲ್ಲ. ಬದಲಾಗಿ ನಂಬಿರುವ ಷೇರು ಮಾರುಕಟ್ಟೆಯಲ್ಲೇ ದುಡ್ಡು ಮಾಡಿ ಗ್ರಾಹಕರಿಗೆ ವಾಪಸ್ ಕೊಡುತ್ತೇನೆ ಅನ್ನೋ ಅಚಲವಾದ ವಿಶ್ವಾಸದಲ್ಲಿದ್ದರು.
ಆದ್ರೆ ಮಾಡಿರುವ ಪ್ರಮಾದದಿಂದ ಹರ್ಷದ್ ಮೆಹ್ತಾ ಅವರಿಗೆ ಹೊರಬರಲು ಆಗಲಿಲ್ಲ. ಕಾನೂನು ಹೋರಾಟ, ತನಿಖಾ ಸಂಸ್ಥೆಗಳ ಸತತ ತನಿಖೆಗಳಿಂದ ಹರ್ಷದ್ ಮೆಹ್ತಾ ಬದುಕಿದ್ದಷ್ಟು ದಿನ ಒತ್ತಡ, ಮಾನಸಿಕ ಕಿರಿಕಿರಿ ನೆಮ್ಮದಿ ಇಲ್ಲದೇ ಸಾವನ್ನಪ್ಪಿದ್ದರು.
ಒಬ್ಬ ಮಧ್ಯಮ ವರ್ಗದ ಬಟ್ಟೆ ವ್ಯಾಪಾರಿಯ ಮಗ ಹರ್ಷದ್ ಮೆಹ್ತಾ.. ಆರಂಭದಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದ ಹರ್ಷದ್ ಷೇರು ಮಾರುಕಟ್ಟೆಯ ದಲ್ಲಾಲಿಯಾದ್ರು. ಅಲ್ಲಿ ಕುಣಿದಾಡುತ್ತಿದ್ದ ಕಾಂಚಾನವನ್ನು ನೋಡಿದಾಗ ತನ್ನ ಬದುಕು ಇದೇ ಅಂತ ಅಂದುಕೊಂಡಿದ್ದರು. ನೋಡ ನೋಡುತ್ತಲೇ ಷೇರು ಮಾರುಟ್ಟೆಯ ಬಿಗ್ ಬುಲ್ ಅದ್ರು. ಅಷ್ಟೇ ಅಲ್ಲ, ಷೇರು ಮಾರುಕಟ್ಟೆಯ ಅಮಿತಾಬ್ ಬಚ್ಚನ್ ಅಂತ ಕರೆಸಿಕೊಂಡ್ರು.
ಹಾಗಂತ ಹರ್ಷದ್ ಮೆಹ್ತಾಗೆ ತಾನು ಮಾಡಿರುವ ಪ್ರಮಾದದ ಬಗ್ಗೆ ಬೇಸರವಿಲ್ಲ. ತಾನು ಮಾಡಿದ್ದು ಸರಿ ಅಂತನೇ ಅವರು ಕೊನೆಯ ತನಕ ಕೂಡ ವಾದಿಸುತ್ತಿದ್ದರು. ತಾನು ಮಾಡಿರುವ ಸಾಧನೆ ಕುಖ್ಯಾತಿಯನ್ನೇ ಪಡೆಯಲಿ.. ಅದರ ಬಗ್ಗೆ ಹೆಮ್ಮೆ ಇದೆ ಅಂತ ಹೇಳುತ್ತಿದ್ದರು.
ಕೋವಿಡ್ ಕೇರ್ ಸೆಂಟರ್‌ನಲ್ಲಿ ಪಿಪಿಇ ಕಿಟ್ ಧರಿಸಿ ನಡೆದ ದೇಶದ ಮೊದಲ ಮದುವೆ
ಇನ್ನು ಕೊನೆಯ ಪ್ರಶ್ನೆ.. ಹಗರಣವನ್ನು ಬೆಳಕಿಗೆ ತಂದಿರುವ ಪತ್ರಕರ್ತೆ ಹರ್ಷದ್ ಮೆಹ್ತಾ ಅವರನ್ನು ಮಾತ್ರ ಯಾಕೆ ಗುರಿಯಾಗಿರಿಸಿಕೊಂಡ್ರು ಅನ್ನೋದಕ್ಕೆ ಸ್ಪಷ್ಟತೆ ಇಲ್ಲ. ಯಾಕಂದ್ರೆ ತಿಮಿಂಗಿಲವನ್ನು ಹಿಡಿಯಲು ಹೋಗಿ ಹರ್ಷದ್ ಮೆಹ್ತಾ ಅನ್ನೋ ಸಣ್ಣ ಮೀನು ಮಾತ್ರ ಬಲೆಗೆ ಬಿತ್ತು ಎಂಬುದು ಅಷ್ಟೇ ಸತ್ಯ. ಹಾಗೇ ಭಾರತೀಯ ಹಣಕಾಸಿನ ವ್ಯವಸ್ಥೆಯ ಹಗರಣದಲ್ಲಿ ಹರ್ಷದ್ ಮೆಹ್ತಾ ಹೆಸರು ದೊಡ್ಡದಾಗಿ ಕೇಳಿಬಂತು..
ಯಾರು ಏನೇ ಅನ್ನಲಿ.. ಹರ್ಷದ್ ಮಹ್ತಾ ವಂಚನೆ, ಮೋಸ ಮಾಡಿರಬಹುದು.. ಆದ್ರೆ ಮೆಹ್ತಾ ಅವರ ಬುದ್ಧಿವಂತಿಕೆ, ಸೇಡು, ಹಠ, ಛಲ ಒಂದು ರೀತಿಯಲ್ಲಿ ಸ್ಪೂರ್ತಿಯಾಗುತ್ತದೆ. ಯಾಕಂದ್ರೆ ಪ್ರತಿ ಕೆಟ್ಟ ಮನುಷ್ಯನಲ್ಲೂ ಒಂದಲ್ಲ ಒಂದು ಒಳ್ಳೆಯ ಗುಣಗಳಿರುತ್ತವೆ. ಅದೇ ರೀತಿ ಹರ್ಷದ್ ಮೆಹ್ತಾ. ಹಾಗಂತ ಎಲ್ಲರೂ ಹರ್ಷದ್ ಮೆಹ್ತಾ ಆಗೋಕೆ ಆಗಲ್ಲ. ಆಗುವುದೂ ಬೇಡ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










