ವಿಜಯಪುರ: ಸರ್ಕಾರ ಕೆಡವಲು 1 ಸಾವಿರ ಕೋಟಿ ಸಿದ್ಧ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರೇ ಹೇಳಿಕೊಂಡಿದ್ದಾರೆ ಎಂದು ಸಚಿವ ಶರಣ ಪ್ರಕಾಶ ಪಾಟೀಲ್ (Sharan Prakash Patil), ವಿಜಯಪುರ ಶಾಸಕ ಬಸನಗೌಡ ಪಾಟೀಲ್ (Basanagouda Patil Yatnal) ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೆಡವಲು 1 ಸಾವಿರ ಕೋಟಿ ತಯಾರಿ ಮಾಡಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ಬಿಜೆಪಿಯಲ್ಲಿ ಅವರೊಬ್ಬ ಪ್ರಮುಖ ನಾಯಕರಿದ್ದಾರೆ. ಅವರಿಗೆ ಏನು ಮಾಹಿತಿ ಇದೆ. ಹಿಂದೆಯೂ 17 ಶಾಸಕರು ರಾಜೀನಾಮೆ ನೀಡಿದ್ದರು. ಇದೆಲ್ಲ ಹಣಬಲದ ಮೇಲೆ ಆಗಿದೆ. ಈಗಲೂ ಅದೇ ರೀತಿ ಪಿತೂರಿ ನಡೆಯುತ್ತಿರಬಹುದು ಎಂದಿದ್ದಾರೆ.
135 ಶಾಸಕರನ್ನ ಆಯ್ಕೆ ಮಾಡುವ ಮುಖಾಂತರ ಸ್ಥಿರ ಸರ್ಕಾರವನ್ನ ರಾಜ್ಯದ ಜನರು ನೀಡಿದ್ದಾರೆ. ಇದನ್ನು ಅಸ್ಥಿರಗೊಳಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಇದು ಸಂವಿಧಾನ ವಿರೋಧಿ ನೀತಿಯಾಗಿದೆ. ಇದರಿಂದ ರಾಜ್ಯದ ಜನರಿಗೆ ಹಾನಿಯಾಗುತ್ತಿದೆ. ರಾಜ್ಯದ ಜನರು ಇದನ್ನು ನೋಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.