ಬೆಂಗಳೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದು, ಬದುಕು ಸಾಗಿಸುವುದೇಗೆ ಎಂದು ಚಿಂತಿತರಾಗಿದ್ದಾರೆ. ಇದರ ಮಧ್ಯೆ ಮದ್ಯಮಾರಾಟದಿಂದಾಗಿ ರಾಜ್ಯ ಸರ್ಕಾರಕ್ಕೆ ಒಂದೇ ವಾರದಲ್ಲಿ ಒಂದು ಸಾವಿರ ಕೋಟಿ ಆದಾಯ ಬಂದಿದೆ. ಈ ಬಗ್ಗೆ ಕೋಲಾರದಲ್ಲಿ ಅಬಕಾರಿ ಸಚಿವ ಹೆಚ್.ನಾಗೇಶ್ ಮಾಹಿತಿ ನೀಡಿದ್ದಾರೆ.
“ಮದ್ಯ ಮಾರಾಟ ಆರಂಭವಾದ ಮೊದಲ ಒಂದು ವಾರದಲ್ಲಿ ಒಂದು ಸಾವಿರ ಕೋಟಿ ಆದಾಯ ಸರ್ಕಾರಕ್ಕೆ ಬಂದಿದೆ” ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ತಿಳಿಸಿದ್ದಾರೆ. 42 ದಿನಗಳ ಲಾಕ್ ಡೌನ್ ಅವಧಿಯಲ್ಲಿ 3 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಪ್ರಸಕ್ತ ಸಾಲಿಗೆ 22,500 ಕೋಟಿ ರೂ ಗುರಿಯಿದ್ದು ಶೇ. 17 ರಷ್ಟು ಅಬಕಾರಿ ಸುಂಕ ಹೆಚ್ಚಳದಿಂದ 2500 ಕೋಟಿ ರೂ ಹೆಚ್ಚುವರಿ ಆದಾಯ ಸಿಗಲಿದ್ದು, ಒಟ್ಟು 25000 ಗುರಿ ಹೊಂದಿದಂತಾಗಿದೆ ಎಂದಿದ್ದಾರೆ.
ಲಾಕ್ ಡೌನ್ ಸಡಿಲಿಸಲಾಗಿದೆ ಎಂದು ಶಿಸ್ತು ಪಾಲಿಸುವುದನ್ನು ಮರೆತರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೋಲಾರ ಗಡಿ ಭಾಗವಾಗಿದ್ದು ನೆರೆಯ ರಾಜ್ಯಗಳಿಂದ ಜನರು ಮದ್ಯ ಖರೀದಿಸಲು ನುಸುಳುವ ಅಪಾಯವಿದ್ದು ಗಡಿಯಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.
ಅಲ್ಲದೇ ಗಡಿಯಲ್ಲಿನ ಮದ್ಯದಂಗಡಿಗಳು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿದ್ದು ಇತರೆಡೆ ಆಧಾರ್ ಕಾರ್ಡ್ ನಲ್ಲಿ ವಿಳಾಸ ಪರಿಶೀಲಿಸಿ ನಂತರವಷ್ಟೇ ಮದ್ಯ ನೀಡಲಾಗುತ್ತಿದೆ ಎಂದು ಸಚಿವ ನಾಗೇಶ್ ವಿವರಿಸಿದ್ದಾರೆ.