ನಮ್ಮದು ಜಾತ್ಯತೀತ ರಾಷ್ಟ್ರ, ನಾವೆಲ್ಲ ಒಂದೇ ಎನ್ನುವ ಮಾತುಗಳು ಕೇವಲ ಭಾಷಣಕ್ಕೆ ಸೀಮಿತವೇ? ಅಡುಗೆ ಮನೆಯ ಹಪ್ಪಳದ ವಿಚಾರದಲ್ಲೂ ಜಾತಿಯ ಭೂತ ಎದ್ದು ಕುಳಿತಿದೆಯಾ? ಹೌದು, ಈಗ ಸಾಮಾಜಿಕ ಜಾಲತಾಣದಲ್ಲಿ ಹಪ್ಪಳದ ಪ್ಯಾಕೆಟ್ ಒಂದು ದೊಡ್ಡ ಯುದ್ಧವನ್ನೇ ಸೃಷ್ಟಿ ಮಾಡಿದೆ. ಬ್ರಾಹ್ಮಣರು ತಯಾರಿಸಿದ ಹಪ್ಪಳ ಎಂಬ ಒಂದೇ ಒಂದು ಸಾಲು, ಇಂಟರ್ನೆಟ್ ಜಗತ್ತಿನಲ್ಲಿ ಪರ ವಿರೋಧದ ಅಲೆಗಳನ್ನೇ ಎಬ್ಬಿಸಿದೆ.
ವಕೀಲರ ಪೋಸ್ಟ್ ಮತ್ತು ವಿವಾದದ ಕಿಡಿ
ಕಾರ್ತಿಕ್ ನಾರಾಯಣ್ ಬಟ್ಟುಲಾ ಎಂಬ ವಕೀಲರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಒಂದು ಫೋಟೋ ಈಗ ಈ ಎಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಆ ಫೋಟೋದಲ್ಲಿರುವ ಹಪ್ಪಳದ ಪ್ಯಾಕೆಟ್ ಮೇಲೆ ಇಂಗ್ಲಿಷ್ ನಲ್ಲಿ ಸ್ಪಷ್ಟವಾಗಿ Happalam prepared by Brahmins (ಬ್ರಾಹ್ಮಣರು ತಯಾರಿಸಿದ ಹಪ್ಪಳ) ಎಂದು ಬರೆಯಲಾಗಿತ್ತು. ಇದನ್ನು ಕಂಡೊಡನೆ ಕೆಂಡಾಮಂಡಲವಾದ ವಕೀಲರು, ಆಹಾರದ ವಿಷಯದಲ್ಲಿ ಜಾತಿಯನ್ನು ತರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಇದು ಕೇವಲ ಬರವಣಿಗೆಯಲ್ಲ, ಬದಲಾಗಿ ನಾವು ಶ್ರೇಷ್ಠರು, ನಮ್ಮ ಕೈಯ ಅಡುಗೆಯೇ ಶುದ್ಧ ಎಂಬ ಅಹಂಕಾರದ ಪ್ರದರ್ಶನ. ಸಮಾಜದಲ್ಲಿ ಜಾತಿಯ ವಿಷಬೀಜ ಬಿತ್ತುವ ಕೆಲಸವಿದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ನೂರಾರು ಮಂದಿ ಇದನ್ನು ಬೆಂಬಲಿಸಿ ಕಮೆಂಟ್ ಮಾಡಿದ್ದರು.
ಅಯ್ಯಂಗಾರ್ ಬೇಕರಿ ಗೌಡ್ರ ಹೋಟೆಲ್ ಇಲ್ವಾ?
ಆದರೆ, ಈ ವಿವಾದಕ್ಕೆ ಸಿಕ್ಕಿದ್ದು ಕೇವಲ ಬೆಂಬಲವಷ್ಟೇ ಅಲ್ಲ, ಅಷ್ಟೇ ಪ್ರಬಲವಾದ ತಿರುಗೇಟು ಕೂಡ. ವಕೀಲರ ಪೋಸ್ಟ್ ಗೆ ಪ್ರತ್ಯುತ್ತರ ನೀಡಿದ ನೆಟ್ಟಿಗರ ದೊಡ್ಡ ಪಡೆಯೊಂದು, ಸಮಾಜದ ದ್ವಂದ್ವ ನೀತಿಯನ್ನು ಪ್ರಶ್ನಿಸಿದೆ. ಹಪ್ಪಳದ ಪ್ಯಾಕೆಟ್ ಮೇಲೆ ಎಲ್ಲಿಯೂ ಇದು ಶ್ರೇಷ್ಠ ವರ್ಗದವರು ತಯಾರಿಸಿದ್ದು ಎಂದು ಬರೆದಿಲ್ಲ, ಕೇವಲ ತಯಾರಕರು ಯಾರು ಎಂದು ಬರೆಯಲಾಗಿದೆ. ಊರೂರುಗಳಲ್ಲಿ ಅಯ್ಯಂಗಾರ್ ಬೇಕರಿಗಳು ರಾರಾಜಿಸುತ್ತಿವೆ, ಗೌಡ್ರ ಮುದ್ದೆ ಖಾನಾವಳಿಗಳು, ಶೆಟ್ರು ಹೋಟೆಲ್ ಗಳು, ಲಿಂಗಾಯತ ಖಾನಾವಳಿಗಳು ಇರುವಾಗ, ಬ್ರಾಹ್ಮಣರ ಹಪ್ಪಳದ ಮೇಲೆ ಮಾತ್ರ ಈ ಕೆಂಗಣ್ಣು ಏಕೆ ಎಂದು ಪ್ರಶ್ನಿಸಿದ್ದಾರೆ.
ಅಷ್ಟು ಮಾತ್ರವಲ್ಲದೆ, ಮಾಂಸಾಹಾರಿ ಹೋಟೆಲ್ ಗಳಲ್ಲಿ ಹಲಾಲ್ ಕಟ್ ಎಂದು ದಪ್ಪ ಅಕ್ಷರಗಳಲ್ಲಿ ಬರೆದಿರುತ್ತಾರೆ. ಅದು ಅವರ ಧಾರ್ಮಿಕ ನಂಬಿಕೆ ಮತ್ತು ಗ್ರಾಹಕರ ಆಯ್ಕೆಯ ವಿಷಯವಾಗುವುದಾದರೆ, ಬ್ರಾಹ್ಮಣರು ತಯಾರಿಸಿದ್ದು ಎಂದು ಬರೆದುಕೊಳ್ಳುವುದು ತಪ್ಪಾಗಲು ಹೇಗೆ ಸಾಧ್ಯ? ಬೇರೆ ಜಾತಿಯವರು ತಮ್ಮ ಹೆಸರನ್ನು ಬಳಸಿಕೊಂಡಾಗ ಅದು ಸಂಪ್ರದಾಯ ಎನಿಸಿಕೊಂಡರೆ, ಬ್ರಾಹ್ಮಣರು ಬಳಸಿಕೊಂಡಾಗ ಅದು ಶ್ರೇಷ್ಠತೆಯ ವ್ಯಸನವಾಗುತ್ತದೆಯೇ ಎಂಬುದು ಹಲವರ ಪ್ರಶ್ನೆಯಾಗಿದೆ.
ತಿನ್ನೋಕೆ ಇಷ್ಟ ಇದ್ರೆ ತಗೊಳ್ಳಿ ಇಲ್ಲಾಂದ್ರೆ ಬಿಡಿ
ಈ ಚರ್ಚೆಯಲ್ಲಿ ಕೇಳಿಬರುತ್ತಿರುವ ಮತ್ತೊಂದು ಪ್ರಮುಖವಾದ ವಾದವೆಂದರೆ ಗ್ರಾಹಕರ ಆಯ್ಕೆ. ಹಪ್ಪಳದ ಪ್ಯಾಕೆಟ್ ಮೇಲೆ ಸ್ಪಷ್ಟವಾಗಿ ಮಾಹಿತಿ ನೀಡಲಾಗಿದೆ. ನಿಮಗೆ ಬ್ರಾಹ್ಮಣರು ತಯಾರಿಸಿದ ಪದಾರ್ಥ ಇಷ್ಟವಿಲ್ಲದಿದ್ದರೆ ಅದನ್ನು ಖರೀದಿಸದೇ ಇರಲು ನಿಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಯಾರೂ ನಿಮ್ಮ ಮನೆಗೆ ಬಂದು ಬಲವಂತವಾಗಿ ಹಪ್ಪಳ ಮಾರಾಟ ಮಾಡುತ್ತಿಲ್ಲ. ಪ್ರತಿಯೊಂದು ಸಮುದಾಯಕ್ಕೂ ತಮ್ಮದೇ ಆದ ಅಡುಗೆ ಪದ್ಧತಿ, ರುಚಿ ಮತ್ತು ಸ್ವಚ್ಛತೆಯ ಮಾನದಂಡಗಳಿರುತ್ತವೆ. ನಿರ್ದಿಷ್ಟ ರುಚಿಯನ್ನು ಇಷ್ಟಪಡುವ ಗ್ರಾಹಕರಿಗಾಗಿ ಆ ಹೆಸರನ್ನು ನಮೂದಿಸುವುದು ಮಾರ್ಕೆಟಿಂಗ್ ತಂತ್ರವೇ ಹೊರತು ಜಾತಿ ನಿಂದನೆಯಲ್ಲ ಎಂದು ಮತ್ತೊಂದು ವರ್ಗ ವಾದಿಸಿದೆ.
ಕುಲ ಕುಲ ಎಂದು ಬಡಿದಾಡದಿರಿ
ಶತಮಾನಗಳ ಹಿಂದೆ ದಾಸಶ್ರೇಷ್ಠ ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂದು ಸಾರಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲೂ ಮನುಷ್ಯನ ಮನಸ್ಸಿನಿಂದ ಜಾತಿಯ ಮಸಿ ಇನ್ನೂ ಮಾಸಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ರಾಜಕಾರಣಿಗಳು ವೋಟಿಗಾಗಿ ಬಳಸುವ ಜಾತಿ ಅಸ್ತ್ರ, ಈಗ ವ್ಯಾಪಾರ ವಹಿವಾಟಿಗೂ ವ್ಯಾಪಿಸಿರುವುದು ವಿಪರ್ಯಾಸ.
ಒಟ್ಟಿನಲ್ಲಿ, ಬ್ರಾಹ್ಮಣ ಎಂಬ ಪದ ಹಪ್ಪಳದ ಪ್ಯಾಕೆಟ್ ಮೇಲೆ ಮುದ್ರಿತವಾಗಿದ್ದೇ ತಡ, ಅದು ಜಾತಿ ವ್ಯವಸ್ಥೆ, ಅಸಮಾನತೆ, ಆಹಾರ ಪದ್ಧತಿ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಕುರಿತಾದ ಬಿಸಿಬಿಸಿ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ಇದನ್ನು ಜಾತಿ ಅಹಂಕಾರ ಎಂದರೆ, ಇನ್ನು ಕೆಲವರು ಇದನ್ನು ಬ್ರಾಹ್ಮಣ ಸಮುದಾಯದ ಮೇಲಿನ ಅನಗತ್ಯ ದ್ವೇಷ ಎಂದು ಕರೆಯುತ್ತಿದ್ದಾರೆ. ಈ ಚರ್ಚೆ ಎಲ್ಲಿಗೆ ಹೋಗಿ ನಿಲ್ಲುತ್ತದೋ ಕಾದು ನೋಡಬೇಕಿದೆ.








