ದೆಹಲಿ ಅಬಕಾರಿ ನೀತಿ ಹಗರಣದ ವಿಚಾರದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹೈಕೋರ್ಟ್ ನ್ಯಾಯಾಧೀಶರ ಎದುರೇ ನೇರ ಸವಾಲು ಹಾಕುವ ಮೂಲಕ ಸಂಚಲನ ಮೂಡಿಸಿದ್ದಾರೆ. ಹೈಕೋರ್ಟ್ ನ್ಯಾಯಾಧೀಶೆ ಸ್ವರ್ಣಕಾಂತ ಶರ್ಮಾ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸಬಾರದು ಮತ್ತು ಅವರು ತಕ್ಷಣವೇ ಪ್ರಕರಣದಿಂದ ಹಿಂದೆ ಸರಿಯಬೇಕು ಎಂದು ಕೇಜ್ರಿವಾಲ್ ಬಹಿರಂಗವಾಗಿ ಮನವಿ ಮಾಡಿದ್ದಾರೆ.
ಸೋಮವಾರ ನಡೆದ ವಿಚಾರಣೆಯ ವೇಳೆ ಹೈಕೋರ್ಟ್‌ನಲ್ಲಿ ಸ್ವತಃ ವಾದ ಮಂಡಿಸಿದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ನ್ಯಾಯಾಧೀಶರ ತಟಸ್ಥತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದರು. ಆರ್‌ಎಸ್‌ಎಸ್‌ನ ಕಾನೂನು ವಿಭಾಗವೆಂದು ಗುರುತಿಸಿಕೊಳ್ಳುವ ಅಖಿಲ ಭಾರತೀಯ ಅಧಿವಕ್ತ ಪರಿಷತ್ ಆಯೋಜಿಸಿದ್ದ ನಾಲ್ಕು ವಿವಿಧ ಕಾರ್ಯಕ್ರಮಗಳಲ್ಲಿ ನೀವು ಭಾಗವಹಿಸಿದ್ದೀರಿ. ನಾವು ಯಾವ ಸಿದ್ಧಾಂತವನ್ನು ರಾಜಕೀಯವಾಗಿ ಬಹಿರಂಗವಾಗಿ ವಿರೋಧಿಸುತ್ತೇವೆಯೋ, ಅದೇ ಸಿದ್ಧಾಂತದ ಸಂಘಟನೆಗಳೊಂದಿಗೆ ನೀವು ಗುರುತಿಸಿಕೊಂಡಿದ್ದೀರಿ. ಇಂತಹ ಸಂದರ್ಭದಲ್ಲಿ ನಿಮ್ಮ ಪೀಠದಲ್ಲಿ ನಡೆಯುವ ವಿಚಾರಣೆ ನಿಷ್ಪಕ್ಷಪಾತವಾಗಿ ಮತ್ತು ತಟಸ್ಥವಾಗಿರಲು ಸಾಧ್ಯವಿಲ್ಲ ಎಂಬ ಬಲವಾದ ಅನುಮಾನ ನಮಗಿದೆ ಎಂದು ಅವರು ನೇರವಾಗಿಯೇ ನುಡಿದರು.
ಈ ಪ್ರಕರಣದ ಹಿನ್ನೆಲೆಯನ್ನು ಗಮನಿಸಿದರೆ, ಫೆಬ್ರವರಿ 27ರಂದು ವಿಚಾರಣಾ ನ್ಯಾಯಾಲಯವು ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ ಒಟ್ಟು 21 ಮಂದಿಯನ್ನು ಖುಲಾಸೆಗೊಳಿಸಿತ್ತು. ಈ ವೇಳೆ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿ ವಿರುದ್ಧ ಕಿಡಿಕಾರಿದ್ದ ನ್ಯಾಯಾಲಯ, ಈ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗಿದೆ ಎಂದು ಹೇಳಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿತ್ತು. ಮಾರ್ಚ್ 9ರಂದು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶೆ ಸ್ವರ್ಣಕಾಂತ ಶರ್ಮಾ ಅವರು, ಕೆಳ ನ್ಯಾಯಾಲಯದ 5,000 ಪುಟಗಳ ಸುದೀರ್ಘ ತೀರ್ಪನ್ನು ಕೇವಲ ಐದು ನಿಮಿಷಗಳಲ್ಲಿ ವಜಾಗೊಳಿಸಿ ನೋಟಿಸ್ ನೀಡಿದ್ದರು. ಇದು ನಮ್ಮನ್ನು ತೀವ್ರವಾಗಿ ಘಾಸಿಗೊಳಿಸಿದೆ ಎಂದು ಕೇಜ್ರಿವಾಲ್ ತಮ್ಮ ವಾದದಲ್ಲಿ ಉಲ್ಲೇಖಿಸಿದರು.
ವಿಚಾರಣೆಯ ವೇಳೆ ತಮ್ಮ ಅಳಲು ತೋಡಿಕೊಂಡ ಕೇಜ್ರಿವಾಲ್, ನಾನು ಇಲ್ಲಿ ಆರೋಪಿಯಾಗಿ ನಿಂತಿಲ್ಲ. ವಿಚಾರಣಾ ನ್ಯಾಯಾಲಯವು ಈಗಾಗಲೇ ನನ್ನನ್ನು ಮುಕ್ತಗೊಳಿಸಿದೆ. ಆದರೆ ಈ ಪ್ರಕರಣ ರಾಜಕೀಯ ಪ್ರೇರಿತವಾಗಿದೆ. ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರಕರಣ ವರ್ಗಾವಣೆ ಮಾಡುವಂತೆ ಪತ್ರ ಬರೆದಿದ್ದಾಗ, ಸಂಬಂಧಪಟ್ಟ ನ್ಯಾಯಾಧೀಶರೇ ಈ ಬಗ್ಗೆ ನಿರ್ಧರಿಸಬೇಕು ಎಂಬ ಉತ್ತರ ಬಂದಿದೆ. ಹಾಗಾಗಿ ನೈತಿಕತೆಯ ಆಧಾರದ ಮೇಲೆ ನೀವು ಈ ಪ್ರಕರಣದಿಂದ ಹಿಂದೆ ಸರಿಯಬೇಕು ಎಂದು ಅವರು ಒತ್ತಾಯಿಸಿದರು.
ಮಧ್ಯಾಹ್ನ 2.30ಕ್ಕೆ ಆರಂಭವಾದ ಈ ಸುದೀರ್ಘ ವಾದ-ಪ್ರತಿವಾದಗಳು ಸಂಜೆ 7 ಗಂಟೆಯವರೆಗೆ ಮುಂದುವರಿದವು. ಎಲ್ಲಾ ಸಿದ್ಧತೆಗಳೊಂದಿಗೆ ಬಂದಿದ್ದ ಕೇಜ್ರಿವಾಲ್ ಅವರ ವಾದವೈಖರಿಯನ್ನು ಕಂಡು ನ್ಯಾಯಾಧೀಶರೇ ಅಚ್ಚರಿ ವ್ಯಕ್ತಪಡಿಸಿದರು. ವಾದದ ಅಂತ್ಯದಲ್ಲಿ ಮಾತನಾಡಿದ ನ್ಯಾಯಾಧೀಶೆ ಸ್ವರ್ಣಕಾಂತ ಶರ್ಮಾ ಅವರು, ನೀವು ತುಂಬಾ ಚೆನ್ನಾಗಿ ವಾದ ಮಂಡಿಸಿದ್ದೀರಿ. ನೀವು ವಕೀಲರೂ ಆಗಬಹುದು ಎಂದು ಕೇಜ್ರಿವಾಲ್ ಅವರ ಶಕ್ತಿಯುತ ವಾದವನ್ನು ಶ್ಲಾಘಿಸಿದರು. ಸದ್ಯ ನ್ಯಾಯಾಲಯವು ಕೇಜ್ರಿವಾಲ್ ಅವರ ಮನವಿಯ ಕುರಿತು ತನ್ನ ತೀರ್ಪನ್ನು ಕಾಯ್ದಿರಿಸಿದೆ.







