ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದಲ್ಲಿ ಈಗ ಭಾರಿ ಸಂಚಲನ ಮೂಡಿದೆ. ಇಷ್ಟು ದಿನ ಭಕ್ತರ ಪಾಲಿಗೆ ಮಾರ್ಗದರ್ಶಕರಾಗಿದ್ದ ವಚನಾನಂದ ಶ್ರೀಗಳ ಅಸಲಿ ಮುಖವಾಡ ಕಳಚಿದೆ ಎಂದು ಸ್ವತಃ ಮಠದ ಟ್ರಸ್ಟಿ ಚಂದ್ರಶೇಖರ ಪೂಜಾರ್ ಸ್ಫೋಟಕ ಸತ್ಯಗಳನ್ನು ಹೊರಹಾಕಿದ್ದಾರೆ. ಈ ಬೆಳವಣಿಗೆಯಿಂದಾಗಿ ಇಡೀ ಮಠದ ಆಡಳಿತ ಮಂಡಳಿ ಹಾಗೂ ಭಕ್ತ ಸಮೂಹ ಬೆಚ್ಚಿಬಿದ್ದಿದೆ.
ಮಸಾಜ್ ಪ್ರಿಯ ಸ್ವಾಮೀಜಿ ಎಂಬ ಹಣೆಪಟ್ಟಿ
ಸುದ್ದಿಗೋಷ್ಠಿಯಲ್ಲಿ ಗುಡುಗಿದ ಚಂದ್ರಶೇಖರ ಪೂಜಾರ್ ಅವರು, ವಚನಾನಂದ ಶ್ರೀಗಳನ್ನು ನೇರವಾಗಿಯೇ ಮಸಾಜ್ ಪ್ರಿಯ ಸ್ವಾಮೀಜಿ ಎಂದು ಲೇವಡಿ ಮಾಡಿದ್ದಾರೆ. ಶ್ರೀಗಳು ಪ್ರತಿದಿನ ಮಠದಲ್ಲಿದ್ದ ಪುಟ್ಟ ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎಂಬ ಅಸಹ್ಯಕರ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ. ಪ್ರತಿನಿತ್ಯ ನಾಲ್ವರು ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಮಸಾಜ್ ಮಾಡಲು ಬಳಸಿಕೊಳ್ಳುತ್ತಿದ್ದರು. ಇದೇ ಕಿರುಕುಳ ತಾಳಲಾರದೆ ಹಾಸ್ಟೆಲ್‌ನಲ್ಲಿದ್ದ 60 ಮಕ್ಕಳ ಸಂಖ್ಯೆ ಇಂದು ಕೇವಲ ಐದಕ್ಕೆ ಬಂದು ನಿಂತಿದೆ. ಉಳಿದ ಮಕ್ಕಳು ಶ್ರೀಗಳ ಕಿರುಕುಳಕ್ಕೆ ಹೆದರಿ ಮಠವನ್ನೇ ಬಿಟ್ಟು ಓಡಿಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಕ್ಸೊ ಕೇಸ್‌ನಿಂದ ಬಚಾವ್ ಆದ ಶ್ರೀಗಳು
ಸ್ವಾಮೀಜಿಯ ಈ ಅಸಹಜ ವರ್ತನೆಯಿಂದ ಆಕ್ರೋಶಗೊಂಡ ಪೋಷಕರು ಇಂದು ಮುಂಜಾನೆಯೇ ಅವರ ವಿರುದ್ಧ ಪೊಕ್ಸೊ ಕಾಯ್ದೆಯಡಿ ದೂರು ನೀಡಲು ಸಿದ್ಧರಾಗಿದ್ದರು. ಆದರೆ ಮಠದ ಘನತೆ ಮತ್ತು ಪೀಠದ ಪಾವಿತ್ರ್ಯತೆಗೆ ಧಕ್ಕೆಯಾಗಬಾರದು ಎಂಬ ಒಂದೇ ಒಂದು ಉದ್ದೇಶದಿಂದ ಟ್ರಸ್ಟಿಗಳೇ ಪೋಷಕರನ್ನು ಸಮಾಧಾನಪಡಿಸಿ ದೂರು ನೀಡದಂತೆ ತಡೆದಿದ್ದಾರೆ. ಶ್ರೀಗಳನ್ನು ತಿದ್ದಲು ಹಿರಿಯರು ಅನೇಕ ಬಾರಿ ಪ್ರಯತ್ನಿಸಿದರೂ ಅವರು ತಮ್ಮ ಹವ್ಯಾಸಗಳನ್ನು ಬದಲಿಸಿಕೊಳ್ಳಲಿಲ್ಲ, ಬದಲಾಗಿ ಅಟ್ಟಹಾಸ ಮುಂದುವರಿಸಿದ್ದಾರೆ ಎಂದು ಟ್ರಸ್ಟಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬಯಲಾಯ್ತು ಅವಾಚ್ಯ ಶಬ್ದಗಳ ಆಡಿಯೋ ಪುರಾಣ
ತನ್ನ ಕಚ್ಚೆ, ಕೈ ಮತ್ತು ಮಾತು ಬಹಳ ಸ್ವಚ್ಛವಾಗಿದೆ ಎಂದು ಜಗತ್ತಿನ ಮುಂದೆ ಹೇಳಿಕೊಳ್ಳುವ ವಚನಾನಂದರು, ಮಕ್ಕಳನ್ನು ಎಂತಹ ಕೆಟ್ಟ ಪದಗಳಿಂದ ನಿಂದಿಸುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿ ಒಂದು ಆಡಿಯೋ ಕ್ಲಿಪ್ ಅನ್ನು ಪೂಜಾರ್ ಬಿಡುಗಡೆ ಮಾಡಿದ್ದಾರೆ. ಸಣ್ಣ ಮಕ್ಕಳನ್ನು ಅತ್ಯಂತ ನೀಚವಾಗಿ ಬೈದಿರುವುದು ಈಗ ಇಡೀ ಸಮಾಜಕ್ಕೆ ಶ್ರೀಗಳ ಅಸಲಿಯತ್ತನ್ನು ತೋರಿಸುತ್ತಿದೆ. ಇಷ್ಟು ದಿನ ಮುಚ್ಚಿಟ್ಟಿದ್ದ ಇವರ ಕರ್ಮಕಾಂಡಗಳು ಈಗ ಒಂದೊಂದಾಗಿ ಹೊರಬರುತ್ತಿವೆ ಎಂದು ತಿರುಗೇಟು ನೀಡಿದ್ದಾರೆ.
ಗೌರವವಾಗಿ ಮಠ ಬಿಟ್ಟು ತೊಲಗಿ ಎಂಬ ಎಚ್ಚರಿಕೆ
ಸಮಾಜದ ಮೇಲೆ ಸವಾರಿ ಮಾಡುತ್ತಾ, ಸಿರಿಗೆರೆ ಶ್ರೀಗಳಂತಹ ಹಿರಿಯ ಬಗ್ಗೆಯೂ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ವಚನಾನಂದರು ತಕ್ಷಣವೇ ಪೀಠದಿಂದ ಕೆಳಗಿಳಿಯಬೇಕು. ಸಂಧಾನಕ್ಕೆ ಕರೆದರೂ ಬಾರದೆ ಓಡಿಹೋಗುತ್ತಿರುವ ಇವರು ಮಠದ ಮರ್ಯಾದೆಯನ್ನು ಹರಾಜು ಹಾಕುತ್ತಿದ್ದಾರೆ. ಕೂಡಲೇ ಮರ್ಯಾದೆಯಿಂದ ಮಠ ಬಿಟ್ಟು ಹೋಗದಿದ್ದರೆ, ಜನರೇ ಹೇಗೆ ಹೊರಹಾಕಬೇಕು ಎಂಬ ನಿರ್ಧಾರ ಮಾಡಲಿದ್ದಾರೆ ಎಂದು ಟ್ರಸ್ಟಿ ಚಂದ್ರಶೇಖರ ಪೂಜಾರ್ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯಿಂದ ಹರಿಹರ ಪೀಠದಲ್ಲಿ ಇತಿಹಾಸದಲ್ಲೇ ಕಾಣದಂತಹ ಬಿರುಗಾಳಿ ಎದ್ದಿದೆ.







