ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕು ದಿನೇ ದಿನೇ ಆತಂಕ ಹೆಚ್ಚಿಸಿದ್ದು, ಮಾನವ ಕುಲವನ್ನು ತಲ್ಲಣಗೊಳಿಸಿದೆ. ಹಲವು ಮುನ್ನೆಚ್ಚರಿಕಾ ಕ್ರಮಗಳ ಹೊರತಾಗಿಯೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿಲೇ ಇದ್ದು, ಇಂದು 10 ಮಂದಿಯಲ್ಲಿ ಮಾರಕ ಸೋಂಕು ದೃಢಪಟ್ಟಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕು ಪೀಡಿತರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದು, ಕಳೆದ ಎರಡು ದಿನಗಳ ಹಿಂದೆ ರಾಜ್ಯದಲ್ಲಿ ಒಂದೇ ದಿನ 7 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು, ಇನ್ನು ನಿನ್ನೆ 8 ಮಂದಿಯಲ್ಲಿ ಸೋಂಕು ಪಾಸಿಟಿವ್ ಬಂದಿತ್ತು. ಇಂದು ಒಂದೇ ದಿನ 10 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದ್ದಾರೆ.








