ಬೆಂಗಳೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾಗಿರುವ ವಲಸೆ ಕಾರ್ಮಿಕರ ಖಾತೆಗೆ ಮುಂದಿನ ಆರು ತಿಂಗಳುಗಳ ಕಾಲ ಪ್ರತಿ ತಿಂಗಳು 10 ಸಾವಿರ ರು.ಗಳನ್ನು ಹಾಕಿ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುಮ್ ಖರ್ಗೆ ಸಲಹೆ ನೀಡಿದ್ದಾರೆ. ಇದರಿಂದ ವಲಸೆ ಕಾರ್ಮಿಕರು ಅಗತ್ಯ ವಸ್ತುಗಳನ್ನು ಖರೀದಿಸಲು ಸಹಾಯವಾಗುವುದಲ್ಲದೇ ಆರ್ಥಿಕತೆಗೆ ಉತ್ತೇಜನವೂ ದೊರೆಯಲಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ಪರಿಹಾರ ಯಾರಿಗೂ ಪ್ರಯೋಜನಕ್ಕೆ ಬರದಂತಿದೆ. ಹಣಕಾಸು ಸಚಿವಾಲಯ ಸಿದ್ಧತೆಯೇ ಇಲ್ಲದೆ ಪ್ರಧಾನಿ ಪ್ರಚಾರಕ್ಕಾಗಿ ಪ್ಯಾಕೇಜ್ ಘೋಷಿಸಿದ್ದಾರೆ. ವಲಸೆ ಕಾರ್ಮಿಕರ ಸ್ಥಿತಿ ಶೋಚನೀಯ ಸ್ಥಿತಿ ತಲುಪಿದರೂ ಸರಕಾರ ಸ್ಪಂದಿಸಲಿಲ್ಲ. ನೂರಾರು ಕಿ.ಮೀ. ನಡೆದೇ ಕಾರ್ಮಿಕರು ಊರು ತಲುಪಬೇಕಾಯಿತು. ಲಾಕ್ ಡೌನ್ ಘೋಷಿಸುವ ಮೊದಲು ವಲಸೆ ಕಾರ್ಮಿಕರು ತಮ್ಮ ತಮ್ಮ ಸ್ಥಳಗಳಿಗೆ ತೆರಳಲು ಅವಕಾಶ ನೀಡಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಜಿಎಸ್ ಟಿ ಬಗ್ಗೆ ಮಾತನಾಡಿದ ಅವರು, ಕೇಂದ್ರ ರಾಜ್ಯಗಳಿಗೆ ಡಿಸೆಂಬರ್, ಜನವರಿ ತಿಂಗಳ ಜಿಎಸ್‌ಟಿ ಪರಿಹಾರದ ಸುಮಾರು 34 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಕೊರೊನಾ ನೆಪದಲ್ಲಿ ಸುಧಾರಣೆ ಕಾರಣ ನೀಡಿ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಕೇಂದ್ರ ಸರಕಾರ ತೊಡಗಿದೆ,” ಎಂದು ಖರ್ಗೆ ಕಿಡಿಕಾರಿದ್ದಾರೆ.
ಇನ್ನು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡುವ 2 ಸಾವಿರ ರೂ. ಯಾವುದಕ್ಕೂ ಪ್ರಯೋಜನ ಬರುವುದಿಲ್ಲ. ಅಲ್ಲದೆ ಕೇಂದ್ರ ಸರ್ಕಾರ ನರೇಗಾ ಯೋಜನೆಗೆ ನೀಡಿರುವ 40 ಸಾವಿರ ಕೋಟಿ ಹೆಚ್ಚುವರಿ ಪರಿಹಾರ 10 ಕೃಷಿ ಕಾರ್ಮಿಕರ ಜೊತೆಗೆ 8 ಕೋಟಿ ವಲಸೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಕಾರ್ಮಿಕರಿಗೆ ಕನಿಷ್ಟ 20 ದಿನ ಮಾತ್ರ ಉದ್ಯೋಗ ನೀಡಬಹುದು ಎಂದು ಖರ್ಗೆ ಕಿಡಿಕಾರಿದ್ದಾರೆ.








