ನವದೆಹಲಿ: ಪ್ರಧಾನಮಂತ್ರಿ ಜನ್ ಧನ್ ಯೋಜನೆ (Jandhan Yojana) (ಪಿಎಂಜೆಡಿವೈ) ಆರಂಭವಾಗಿ 10 ವರ್ಷ ಕಳೆದಿವೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) 2014 ರಲ್ಲಿ ಆರಂಭವಾಗಿತ್ತು. ಸದ್ಯ ಈ ಯೋಜನೆಯಿಂದಾಗಿ 53.1 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, 2.3 ಕೋಟಿ ರೂ. ಜಮೆಯಾಗಿದೆ. 30 ಕೋಟಿ ಮಹಿಳೆಯರಿಗೆ ಇದರ ಉಪಯೋಗವಾಗಿದೆ.
ಈ ಯೋಜನೆ ಆರಂಭವಾಗಿ 10 ವರ್ಷ ಕಳೆದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಹರ್ಷ ವ್ಯಕ್ತಪಿಡಸಿರುವ ಪ್ರಧಾನಿ ಮೋದಿ, ಜನ್ ಧನ್ ಯೋಜನೆಗೆ 10 ವರ್ಷ ತುಂಬಿದೆ. ಈ ಯೋಜನೆಯಿಂದಾಗಿ ಹಣಕಾಸಿನ ವ್ಯವಹಾರದ ಒಳಗೊಳ್ಳುವಿಕೆಯಲ್ಲಿ ಉತ್ತೇಜನ ಕಂಡಿದೆ. ಕೋಟ್ಯಂತರ ಜನರು ಇದರ ಉಪಯೋಗ ಪಡೆದುಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಮಹಿಳೆಯರು, ಯುವಕರು ಮತ್ತು ಬಡ ಕುಟುಂಬಗಳು ಇದರ ಉಪಯೋಗ ಪಡೆದುಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
2014 ರಲ್ಲಿ ಪ್ರಾರಂಭವಾದ ಈ ಯೋಜನೆಯು ಯಶಸ್ವಿಯಾಗಿ 53.1 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆದಿದೆ, 2.3 ಲಕ್ಷ ಕೋಟಿ ರೂ.ಗಳಷ್ಟು ಠೇವಣಿಗಳನ್ನು ಸಂಗ್ರಹಿಸಿದೆ. ಗಮನಾರ್ಹವಾಗಿ, ಸುಮಾರು 30 ಕೋಟಿ ಫಲಾನುಭವಿಗಳು ಮಹಿಳೆಯರಾಗಿದ್ದು, ಅಂಚಿನಲ್ಲಿರುವ ಸಮುದಾಯಗಳ ಸಬಲೀಕರಣದ ಮೇಲೆ ಯೋಜನೆಯ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ, ಈ ಯೋಜನೆ ಕುರಿತು ಮಾತನಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ಯೋಜನೆ 53.13 ಕೋಟಿ ಖಾತೆಗಳೊಂದಿಗೆ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಅದರಲ್ಲಿ ಶೇ. 55.6ರಷ್ಟು ಮಹಿಳೆಯರಿದ್ದಾರೆ. ಯೋಜನೆಯು ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿನ ಮಹಿಳೆಯರಿಗೆ ಇದು ಸಹಾಯಕವಾಗಿದೆ. ಎಲ್ಲಾ ಖಾತೆಗಳು ಶೇ. 66.6 ಕಾರ್ಯಪ್ರವೃತ್ತವಾಗಿವೆ. ಠೇವಣಿ ಬ್ಯಾಲೆನ್ಸ್ಗಳು 2,31,236 ಕೋಟಿ ರೂ.ಗೆ ಏರಿಕೆಯಾಗಿದ್ದು, ಯೋಜನೆ ಪ್ರಾರಂಭವಾದಾಗಿನಿಂದ ಠೇವಣಿಗಳಲ್ಲಿ 15 ಪಟ್ಟು ಹೆಚ್ಚಳ ಮತ್ತು ಖಾತೆಗಳಲ್ಲಿ 3.6 ಪಟ್ಟು ಏರಿಕೆ ಯಾಗಿದೆ ಎಂದು ಹೇಳಿದ್ದಾರೆ.