ಬೆಂಗಳೂರು: ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆದಿರುವ ಘಟನೆ ನಡೆದಿದೆ.
ಈ ಘಟನೆಗೆ ಮುನಿರತ್ನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಸುಮಾ ಅವರನ್ನು ಶಾಸಕಿಯಾಗಿ ಮಾಡಲು ಡಿಕೆ ಸುರೇಶ್, ಡಿಕೆ ಶಿವಕುಮಾರ್ ಬೆಂಬಲಿಗರಿಂದ ನನ್ನ ಮೇಲೆ ಆಸೀಡ್ ದಾಳಿ ನಡೆದಿದೆ ಎಂದು ಆರೋಪಿಸಿದ್ದಾರೆ.
ಲಗ್ಗೆರೆ ನಂತರ ಲಕ್ಷ್ಮಿದೇವಿ ನಗರದಲ್ಲಿ ವಾಜಪೇಯಿಯವರ 100 ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮುನಿರತ್ನ ಭಾಗಿಯಾಗಿದ್ದರು. ಈ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದಾಗ ಮುನಿರತ್ನ ಮೇಲೆ ಕಲ್ಲು ಮತ್ತು ಮೊಟ್ಟೆ ದಾಳಿ ನಡೆದಿದೆ. ಕಾರಿನ ಗಾಜಿನ ಮೇಲೆಯೇ ಕಲ್ಲು ಬಿದ್ದಿದೆ. ಕೂಡಲೇ ಪೊಲೀಸರು ಮೊಟ್ಟೆ ಎಸೆದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಮೊಟ್ಟೆಯ ಒಳಗಡೆ ಆಸಿಡ್ ಹಾಕಿ ದಾಳಿ ಮಾಡಿದ್ದಾರೆ. ಗುಂಪು ದಾಳಿ ಮಾಡಿ ನನ್ನ ಕೊಲೆ ಮಾಡಲು ಮುಂದಾಗಿದ್ದಾರೆ ಎಂದು ಮುನಿರತ್ನ ಆರೋಪಿಸಿದ್ದಾರೆ.








