ನೆದರ್ ಲ್ಯಾಂಡ್ : ಕೊರೊನಾ ಸೋಂಕಿನಿಂದ ಈಗಾಗಲೇ 40 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ಕೊರೊನಾ ವೈರಸ್ ನಿಂದ ಮೃತಪಡುತ್ತಿರುವವರು ಬಹುಪಾಲು ವೃದ್ಧರು. ಅದರಲ್ಲೂ ಅಸ್ತಮಾ, ಹೃದಯತೊಂದರೆಯಂತಹ ಕಾಯಿಲೆ ಇರುವವರು. ಆದರೆ 101 ವರ್ಷದ ವೃದ್ಧೆಯೋರ್ವರು ಮಾರಣಾಂತಿಕ ಕೊರೊನಾ ವೈರಸನ್ನೇ ಮಣಿಸಿ, ಅಚ್ಚರಿಯ ರೀತಿಯಲ್ಲಿ ಜೀವ ಉಳಿಸಿಕೊಂಡಿದ್ದಾರೆ.
ನೆದರ್ ಲ್ಯಾಂಡ್ ನ ರೋಟರ್ಡ್ಯಾಮ್ ಬಳಿಯ ಆಸ್ಪತ್ರೆಗೆ ಉಸಿರಾಟದ ಸಮಸ್ಯೆಯಿಂದ ವೃದ್ಧೆವೊಬ್ಬರು ದಾಖಲಾಗಿದ್ದರು. ತಪಾಸಣೆಗೆ ಒಳಪಡಿಸಿದಾಗ
ಅವರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿತ್ತು. ಅವರಿಗೆ ಐಸೋಲೇಶನ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿತ್ತು. ಒಂದು ವಾರಕ್ಕೂ ಹೆಚ್ಚು ಕಾಲ ಟ್ರೀಟ್ ಮೆಂಟ್ ನೀಡಿದ ಬಳಿಕ ಈಗ ಅವರನ್ನು ಡಿಸ್ಚಾರ್ಜ್ ಮಾಡುವಷ್ಟು ಗುಣಮುಖರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಮಹಿಳೆ ಗಟ್ಟಿಗಿತ್ತಿ. ನಾವು ನೀಡಿದ ಸಲಹೆ, ಸೂಚನೆಗಳನ್ನು ಚಾಚೂತಪ್ಪದೆ ಅನುಸರಿಸುವುದನ್ನು ನೋಡಿ ತುಂಬ ಖುಷಿಯಾಯಿತು. ಸೀನುವಾಗೆಲ್ಲ ತಮ್ಮ ಮೊಣಕೈ ಅಡ್ಡ ಹಿಡಿಯುತ್ತಿದ್ದರು. ಅಂತರ ಕಾಯ್ದುಕೊಳ್ಳಿ, ಸುಮ್ಮನೆ ಹತ್ತಿರ ಬರಬೇಡಿ ಎಂದು ನಮಗೇ ಹೇಳುತ್ತಿದ್ದರು. ಅಷ್ಟರ ಮಟ್ಟಿಗೆ ತಿಳಿವಳಿಕೆ ಇತ್ತು ಎಂದು ವೃದ್ಧೆಗೆ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.








