ಮರು ಮದುವೆಗಾಗಿ ಕುರುಳಿನ ಕುಡಿಯನ್ನೇ ಮಾರಿದ ಪಾಪಿ ತಾಯಿ
ಮರು ಮದುವೆಯಾಗಲು ತಾಯಿಯೊಬ್ಬಳು ತಾನು ಹೆತ್ತ ಮಗುವನ್ನೇ ಮಾರಾಟ ಮಾಡಿ ತಾಯಿ ಹೆಸರಿಗೆ ಕಳಂಕ ತಂದಿರುವಂತಹ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. 9 ತಿಂಗಳ ಮಗುವನ್ನ ಹೆತ್ತ ತಾಯಿಯೇ ಮಾರಾಟ ಮಾಡಿದ್ದಾಳೆ. ಮರು ಮದುವೆಗೆ ಅಡ್ಡಿಯಾಗಿದ್ದಕ್ಕೆ ಮಗುವನ್ನ ಮಾರಾಟ ಮಾಡಿರೋದು ತಿಳಿದುಬಂದಿದೆ. ತಮಿಳುನಾಡಿನ ತೂತುಕ್ಕುಡಿಯಲ್ಲಿ ಈ ಘಟನೆ ನಡೆದಿದ್ದು ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 2019ರಲ್ಲಿ ಮಣಿಕಂಠನ್ (38) ಎಂಬಾತನನ್ನ ಜೆಬಮಲಾರ್ (28) ಎಂಬಾಕೆ ಮದುವೆಯಾಗಿದ್ದಳು. ಬಳಿಕ ಇವರ ಸಂಬಂಧದಲ್ಲಿ ಮನಸ್ತಾಪ ಉಂಟಾಗಿದೆ. ಈ ವೇಳೆ ಜೆಬಮಲಾರ್ ಗರ್ಭಿಣಿಯಾಗಿ ಮಗುವಿಗೂ ಜನ್ಮ ನೀಡಿದ್ದಾಳೆ. ಆದರೆ ಗಂಡ ಹೆಂಡತಿ ನಡುವೆ ಮನಸ್ತಾಪ ಸರಿ ಹೋಗದ ಕಾರಣಕ್ಕೆ ಆಕೆ ಗಂಡನ ಮನೆ ಬಿಟ್ಟು ತವರು ಮನೆಗೆ ಬಂದಿದ್ದಾಳೆ. ಇತ್ತ ತವರು ಮನೆಯವರು ಆಕೆಗೆ ಮತ್ತೊಂದು ಮದುವೆ ಮಾಡಲು ನಿರ್ಧರಿಸಿದ್ದಾರೆ. ಆಗ ಮಗು ಅಡ್ಡಿಯಾಗುವ ಕಾರಣದಿಂದಾಗಿ ಮಗುವನ್ನು ಮಾರಾಟ ಮಾಡಲು ಎಲ್ಲರೂ ಸೇರಿ ಸಂಚು ರೂಪಿಸಿದ್ದಾರೆ.
ಮಹಿಳೆ ಮೇಲೆ ಆಟೋ ಚಾಲಕ ಸೇರಿ ಮೂವರಿಂದ ಸಾಮೂಹಿಕ ಅತ್ಯಾಚಾರ
ಈ ನಡುವೆ ಮಕ್ಕಳ ಖರೀದಿಗಾಗಿ ಓಡಾಡುತ್ತಿದ್ದ ಸೆಲ್ವಮಣಿ ಹಾಗೂ ಶ್ರೀದೇವಿ ಎಂಬುವವರು ಇವರಿಗೆ ಪರಿಚಯವಾಗಿದ್ದಾರೆ. ನಂತರ ಜೆಬಮಲಾರ್ ಪೋಷಕರು 3 ಲಕ್ಷಕ್ಕೆ ಮಗುವನ್ನು ಮಾರಾಟ ಮಾಡಿದ್ದಾರೆ. ಈ ವಿಚಾರ ಜೆಬಮಲಾರ್ ಗಂಡ ಮಣಿಕಂಠನ್ ಗೆ ಗೊತ್ತಾಗಿಬಿಟ್ಟಿದೆ. ತಕ್ಷಣ ಹೆಂಡತಿಯ ತವರು ಮನೆಗೆ ಹೋಗಿ ಮಗುವಿನ ಬಗ್ಗೆ ಕೇಳಿದ್ದಾನೆ. ಉತ್ತರ ಸಿಗದೇ ಹೋದಾಗ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಮಗು ಖರೀದಿಸಿದ ದಂಪತಿ, ಇದಕ್ಕೆ ಸಹಕರಿಸಿದ ಬ್ರೋಕರ್ ಹಾಗೂ ಮಗು ಮಾರಾಟ ಮಾಡಿದವರನ್ನು ಬಂಧಿಸಿದ್ದಾರೆ.