ಅಬುಧಾಬಿಯಲ್ಲಿ ಅಬ್ಬರಿಸಿ ದರೂ ಟೂರ್ನಿಯಿಂದ ಹೊರ ಬಿದ್ದ ಮುಂಬೈ- ಸನ್ರೈಸ್ ನಿಂದ ರನ್ ಬೇಟೆ
ಅಬುಧಾಬಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದ್ರಾಬಾದ್ ನಡುವಿನ ಪಂದ್ಯದಲ್ಲಿ ಸಿಡಿದಿದ್ದು ಒಟ್ಟು 428 ರನ್ಗಳು. ಎರಡೂ ತಂಡಗಳ ಬೌಲರ್ಗಳು ಕಬ್ಬಳಿಸಿದ್ದು 17 ವಿಕೆಟ್. 51ಫೋರ್, 12 ಸಿಕ್ಸರ್ಗಳು ಒಟ್ಟಾರೆಯಾಗಿ ಎರಡೂ ತಂಡದಿಂದ ಸಿಡಿದಿತ್ತು. ಮುಂಬೈ ಅಬ್ಬರಿಸಿ ಬೊಬ್ಬಿರಿದು 42 ರನ್ಗಳ ಜಯ ದಾಖಲಿಸಿದರೂ ರನ್ರೇಟ್ ಲೆಕ್ಕಾಚಾರದಲ್ಲಿ ಟೂರ್ನಿಯಿಂದ ಹೊರ ಬಿತ್ತು.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಅಸಾಧ್ಯ ಅನ್ನುವುದನ್ನು ಸಾಧಿಸಲು ಹೊರಟಿತ್ತು. ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಮೊದಲ ಎಸೆತದಿಂದಲೇ ಸಿಕ್ಸ್, ಫೋರ್ಗಳ ಸುರಿಮಳೆ ಮಾಡಿದರು. ಇಶನ್ ಕಿಶನ್ ಅಂತೂ ಸಿಂಗಲ್ಸ್, ಡಬಲ್ಸ್ ಮಾತೇ ಇಲ್ಲ, ಬೌಂಡರಿ, ಸಿಕ್ಸರ್ಗಳಿಂದಲೇ ಆರ್ಭಟಿಸಿದರು. ಕೇವಲ 3.4 ಓವರುಗಳಲ್ಲಿ ಮುಂಬೈ 50 ರನ್ಗಳ ಗಡಿ ದಾಟಿತ್ತು. ಕಿಶನ್ 16 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದ್ದರು. 6ನೇ ಓವರ್ನ ಆರಂಭದಲ್ಲಿ ರೋಹಿತ್ ಶರ್ಮಾ ರಶೀದ್ ಖಾನ್ಗೆ ವಿಕೆಟ್ ಒಪ್ಪಿಸಿದರು. ಪವರ್ ಪ್ಲೇ- ಅಂತ್ಯವಾದಾಗ ಮುಂಬೈ ಸ್ಕೋರ್ 83 ರನ್.
ಮುಂಬೈ 7.1 ಓವರ್ನಲ್ಲೇ 100ರನ್ಗಳ ಗಡಿ ದಾಟಿತ್ತು. ಆದರೆ ಭಡ್ತಿ ಪಡೆದು ಬಂದಿದ್ದ ಪಾಂಡ್ಯ 10ರನ್ಗಳಿಸಿ ಔಟಾದರು. ಇನ್ನೊಂದು ಕಡೆಯಲ್ಲಿ ಕಿಶನ್ ಅಬ್ಬರ ಮುಂದುವರೆದಿತ್ತು. 32 ಎಸೆತಗಳಲ್ಲಿ 11 ಫೋರ್ ಮತ್ತು 4 ಸಿಕ್ಸರ್ನೆರವಿನಿಂದ ಬರೋಬ್ಬರಿ 84ರನ್ಗಳಿಸಿದ್ದ ಕಿಶನ್ ಉಮ್ರನ್ ಮಲಿಕ್ಗೆ ವಿಕೆಟ್ ಒಪ್ಪಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವುದು ಸಾಧಿಸಿದ RCB
ಕೈರಾನ್ ಪೊಲ್ಲಾರ್ಡ್ ಮತ್ತು ಸೂರ್ಯ ಕುಮಾರ್ ಯಾದವ್ ಕೂಡ ಬಿರುಸಿನ ಆಟಕ್ಕೆ ಇಳಿದರು. ಸೂರ್ಯಕುಮಾರ್ ಅಂತೂ ಅಮೋಘ ಟಚ್ನಲ್ಲಿದ್ದರು. ಪೊಲ್ಲಾರ್ಡ್ 13 ರನ್ಗಳಿಸಿ ಔಟಾದರೆ, ಮುಂದಿನ ಎಸೆತದಲ್ಲೇ ಜೇಮ್ಸ್ ನಿಶಾಮ್ ಖಾತೆ ತೆರೆಯದೆ ಡಗ್ಔಟ್ ಸೇರಿಕೊಂಡರು. ಕೃನಾಲ್ ಪಾಂಡ್ಯಾ, ಕೌಲ್ಟರ್ ನೈಲ್ ಮತ್ತು ಪಿಯೂಶ್ ಚಾವ್ಲಾ ಎರಡಂಕಿ ಕೂಡ ಮುಟ್ಟಲಿಲ್ಲ. ಆದರೆ ಸೂರ್ಯ ಕುಮಾರ್ ಮಾತ್ರ ಹೈದ್ರಾಬಾದ್ ಬೌಲರ್ಗಳ ಮಾನ ಕಳೆದಿದ್ದರು. ಸೂರ್ಯಕುಮಾರ್ ಬ್ಯಾಟ್ಗೆ ತಾಗಿದ ಎಸೆಗಳೆಲ್ಲವೂ ಬೌಂಡರಿ ಸೇರುತ್ತಿದ್ದವು. ಸೂರ್ಯಕುಮಾರ್ ಯಾದವ್ ಕೇವಲ 40 ಎಸೆತಗಳಲ್ಲಿ 13 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 82ರನ್ಗಳಿಸಿದ್ದರು. ಮುಂಬೈ 20 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 235 ರನ್ಗಳಿಸಿತು.
ಮುಂಬೈ ಪ್ಲೇ-ಆಫ್ಗೆ ಏರಬೇಕಾದರೆ ಹೈದ್ರಾಬಾದ್ ತಂಡವನ್ನು 64 ರನ್ಗಳಿಗೆ ಆಲೌಟ್ ಮಾಡಬೇಕಿತ್ತು. ಆದರೆ ಆರಂಭಿಕರಾಗಿ ಕಣಕ್ಕಿಳಿದ ಜೇಸನ್ ರಾಯ್ ಮತ್ತು ಅಭಿಷೇಕ್ ಶರ್ಮಾ ಇದಕ್ಕೆ ಅವಕಾಶ ನೀಡಲಿಲ್ಲ. ಮುಂಬೈ ಬೌಲರ್ಗಳನ್ನು ಈ ಜೋಡಿ ಬೆಂಡೆತ್ತಿತ್ತು. ಮೊದಲ ವಿಕೆಟ್ಗೆ ಈ ಜೋಡಿ 64 ರನ್ಗಳಿಸಿ ಮುಂಬೈ ಆಸೆಗೆ ತಣ್ಣೀರು ಎರಚಿತು. ರಾಯ್ 21 ಎಸೆತಗಳಲ್ಲಿ 34ರನ್ಗಳಿಸಿದರೆ, ಶರ್ಮಾ 16 ಎಸೆತಗಳಲ್ಲಿ 33 ರನ್ ಸಿಡಿಸಿದರು. ಮೊಹಮ್ಮದ್ ನಬಿ ಮತ್ತು ಅಬ್ದುಲ್ ಸಮದ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ನಾಯಕನಾಗಿ ಕಣಕ್ಕಿಳಿದಿದ್ದ ಮನೀಷ್ ಪಾಂಡೆ ಅಬ್ಬರಿಸಲು ಆರಂಭಿಸಿದರು. ಪಾಂಡೆಗೆ ಪ್ರಿಯಂ ಗರ್ಗ್ ಉತ್ತಮ ಸಾಥ್ ನೀಡಿದರು. ಪಾಂಡೆ ಅರ್ಧಶತಕದ ಗಡಿ ದಾಟಿದರೆ ಗರ್ಗ್ 29 ರನ್ಗಳಿಸಿ ಔಟಾದರು. ಹೋಲ್ಡರ್, ರಶೀದ್ ಖಾನ್ ಮತ್ತು ವೃದ್ಧಿಮಾನ್ ಸಾಹಾ ಪಾಂಡೆಗೆ ಸರಿಯಾದ ಸಾಥ್ ನೀಡಲಿಲ್ಲ. ಪಾಂಡೆ 41 ಎಸೆತಗಳಲ್ಲಿ 69 ರನ್ಗಳಿಸಿ ಅಜೇಯರಾಗಿ ಉಳಿದರು. ಸನ್ರೈಸರ್ಸ್ 20 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್ಗಳಿಸಿತು. ಮುಂಬೈ 42 ರನ್ಗಳ ಜಯ ದಾಖಲಿಸಿದರೂ ಟೂರ್ನಿಯಿಂದ ಹೊರಬಿತ್ತು.