ನಾಳೆಯಿಂದ ಹಾಸನಾಂಬೆ ದರ್ಶನ ನ.6 ರವರೆಗೆ ಅವಕಾಶ
ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನ ನಾಳೆಯಿಂದ ಆರಂಭವಾಗಲಿದೆ. ವಿವಿಧ ಹಿಂದೂ ಪರ ಸಂಘಟನೆಗಳು ಭಕ್ತರು ಮತ್ತು ರಾಜಕೀಯ ನಾಯಕರುಗಳಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಸಾಮಾನ್ಯ ಭಕ್ತ ಗಣಕ್ಕೆ ದರ್ಶನದ ಅವಕಾಶ ನೀಡಲಾಗಿದೆ. ಈ ಹಿಂದೆ ಕೋವಿಡ್ ಕಾರಣಗಳಿಗಾಗಿ ಹಾಸನಾಂಬೆಯ ದರ್ಶನವನ್ನ ಜಿಲ್ಲಾಡಳಿತ ನಿಷೇಧಿಸಲಾಗಿತ್ತು.
ಅ.28 ರಿಂದ ನ.6 ರವರೆಗೆ ಹಾಸನಾಂಬೆ ದೇವಾಲಯ ಬಾಗಿಲು ತೆರೆಯಲಿದ್ದು ಮೊದಲ ಹಾಗೂ ಕೊನೆಯ ದಿನ ಸಾರ್ವಜನಿಕರಿಗೆ ಅವಕಾಶವಿಲ್ಲ. ಉಳಿದ ಏಳು ದಿನಗಳು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1, ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ರವರೆಗೆ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ದೇವಿಯ ದರ್ಶನಕ್ಕೆ ಬರುವ ಪ್ರತಿಯೊಬ್ಬರು ಕೋವಿಡ್ ನ ಎರಡು ಡೋಸ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ತೋರಿಸುವುದು ಕಡ್ಡಾಯವಾಗಿದೆ. ಜೊತೆಗೆ ಆಧಾರ್ ಅಥವಾ ವೋಟರ್ ಐಡಿ ತೋರಿಸಿದರೆ ಮಾತ್ರ ದರ್ಶನದ ಅವಕಾಶ ಸಿಗಲಿದೆ.
ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಈ ಹಿಂದೆ ಇದ್ದಂತೆ ಪ್ರಸಾದ ವಿತರಣೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಹಿಂದಿನ ರೀತಿ ಹಾಸನಾಂಬೆ ಶೀಘ್ರ ದರ್ಶನಕ್ಕಾಗಿ ಒಂದು ಸಾವಿರ ಮತ್ತು 300 ರೂ ಟಿಕೆಟ್ ವ್ಯವಸ್ಥೆ ಮುಂದುವರಿಯಲಿದೆ.