ಕಾರ್ಗಿಲ್ ಯುದ್ಧದ ಹೀರೋ ಕ್ಯಾಪ್ಟನ್ ನವೀನ್ ನಾಗಪ್ಪ ಅವರನ್ನ ರಾಜ್ಯ ಪ್ರಶಸ್ತಿ ಅರಸಿಕೊಂಡು ಬಂದಿದೆ. ಅವರ ಜೀವನಗಾಥೆ ಓದುವವರ ಮೈ ನವಿರೇಳಿಸುವಂತಿದೆ, ಮತ್ತು ಸ್ಪೂರ್ತಿದಾಯಕವಾಗಿದೆ.
ಕ್ಯಾಪ್ಟನ್ ನವೀನ್ ನಾಗಪ್ಪ ….
ಅವರೊಬ್ಬ ಕಾರ್ಗಿಲ್ ವೀರಯೋಧ! 13ನೇ ಬಟಾಲಿಯನ್ ಜಮ್ಮು ಕಾಶ್ಮೀರ್ ತಂಡದ ಸೈನಿಕ. ಕಾರ್ಗಿಲ್ ಪ್ರದೇಶದ ಅತ್ಯಂತ ಕಷ್ಟವಾದ ಹಾಗೂ ಅಷ್ಟೇ ಪ್ರಮುಖವಾದ ಪಾಯಿಂಟ್ 4857 ಟಾಸ್ಕ್ ಗೆ ಜುಲೈ 4ರಂದು ಸಂಜೆ 6:30ರ ಸುಮಾರಿಗೆ ಹೊರಟೇಬಿಟ್ಟರು. ಆಗ ಅವರಿಗೆ ಕೇವಲ 25 ವರ್ಷ ವಯಸ್ಸು. ದೇಶಕ್ಕಾಗಿ ಅದೆಂತಹ ತುಡಿತವಿದ್ದಿರಬೇಕು ಆತನಿಗೆ!
ಬಾಯಾರಿಕೆ ಆದರೆ ಅಲ್ಲಿನ ಮಂಜುಗಡ್ಡೆಯನ್ನೆ ನೀರಾಗಿಸಬೇಕಿತ್ತು, ಅಲ್ಲಿ ಚಾಕೊಲೇಟೇ ಆಹಾರವಾಗಿತ್ತು. ಎದುರಾಳಿಗಳ ಗುಂಡಿನ ದಾಳಿಗಳನ್ನು ಎದುರಿಸುತ್ತಾ ರಾತ್ರಿಯಿಡಿಯ ಕಾರ್ಯಾಚರಣೆಯಲ್ಲಿ 3-4 ಬಂಕರುಗಳನ್ನು ನಾಶಪಡಿಸಿ ಮುನ್ನುಗ್ಗುತ್ತಿರುವಾಗ ಮೊದಲ ಆಘಾತ ಘಟಿಸುತ್ತದೆ. ಅವರ ಜತೆಗಾರ ಶ್ಯಾಮ್ ಸಿಂಗ್ ವೀರ ಮರಣವನ್ನಪ್ಪಿದ್ದ.
ಇವರ ಕಾರ್ಯಾಚರಣೆ ಮುಂದುವರೆದಿತ್ತು, ಜುಲೈ 6ರಂದು ಇವರ ಮೇಲಾಧಿಕಾರಿ ಇವರನ್ನು ಸಂಪರ್ಕಿಸಿ ಆಹಾರಗಳನ್ನು ಪೂರೈಕೆ ಮಾಡಬೇಕಾ ಎಂದು ಕೇಳುತ್ತಾರೆ. ಇವರು ಕೊನೆಯ ಬಾರಿ ಆಹಾರ ಸೇವಿಸಿದ್ದು ಜುಲೈ 4ರ ಮಧ್ಯಾಹ್ನ, ಅಲ್ಲಿಂದ ನಂತರ ಏನೂ ಇಲ್ಲ. ಆದರೂ ಅವರು ಹೇಳ್ತಾರೆ, “ನಮಗೆ ಯುದ್ಧ ಸಲಕರಣೆಗಳನ್ನು ಕಳುಹಿಸಿ, ಆಹಾರ ಇಲ್ಲದೆಯೂ ನಾವು ಇರಬಹುದು, ಆದರೆ ಯುದ್ಧ ಸಲಕರಣೆ ಇಲ್ಲದೇ ಸಾಧ್ಯವಿಲ್ಲ” ಎಂದು.
ಜುಲೈ 7ರ ಬೆಳಗಿನ ಜಾವ ತೆವಳಿಕೊಂಡು ಹೋಗುವಾಗ ಕಣ್ಣೆದುರು ಒಂದು ಗ್ರೆನೇಡ್ ಬಂದು ಬೀಳುತ್ತದೆ. ಅದು ಸಿಡಿಯಲು ಕೇವಲ ನಾಲ್ಕು ಸೆಕೆಂಡ್ ಬಾಕಿ ಇರುತ್ತದೆ. ಗ್ರೆನೇಡ್ ತೆಗೆದು ಎದುರಾಳಿಯತ್ತ ಎಸೆದರು, ದುರ್ವಿಧಿಯೋ ಎಂಬಂತೆ ಎದುರಿಗೆ ಒಂದು ದೊಡ್ಡ ಬಂಡೆ ಇತ್ತು, ಅದಕ್ಕೆ ತಾಗಿ ಇವರ ಬುಡದಲ್ಲೇ ಬಂದು ಬಿತ್ತು. ಆ ಗ್ರೆನೇಡ್ ಸಿಡಿದರೆ 10 ಮೀಟರ್ ಸುತ್ತಳತೆಯಲ್ಲಿ ಎಲ್ಲವೂ ಚಿಂದಿಯಾಗುವ ಸಾಧ್ಯತೆ. ಅಂತಹ ಸಂದರ್ಭದಲ್ಲೂ ಅವರು ಯೋಚಿಸಿದ್ದು ಅವರ ಜತೆಗಾರರು ಸುರಕ್ಷಿರವಾಗಿದ್ದಾರಾ ಎಂದು!
ನಂತರ ಯೋಚಿಸಿದ್ದು, ತನ್ನ ದೇಶದವರಿಗೆ ತನ್ನ ದೇಹ ಚೂರುಚೂರಾಗಿ ಪ್ಯಾಕೇಟಿನಲ್ಲಿ ಸಿಗುವುದಕ್ಕಿಂತ ಕನಿಷ್ಠ ದೇಹದ ಮೇಲಿನ ಅರ್ಧಭಾಗವಾದರೂ ಸಿಗಲಿ ಎಂದು ಪಕ್ಕಕ್ಕೆ ಉರುಳಿದರು. ಅಷ್ಟರಲ್ಲಿ ಗ್ರೆನೇಡ್ ಅವರ ಕಾಲಬುಡದಲ್ಲೇ ಸಿಡಿದಿದ್ದರಿಂದ ಅವರ ಕಾಲಿಗೆ ದೊಡ್ಡ ರೀತಿಯಲ್ಲಿ ಪೆಟ್ಟಾಗಿತ್ತು. ಆದರೂ ಧೃತಿಗೆಡದ ಅವರು, ಪುನಃ ಬಂದೂಕನ್ನು ಎತ್ತಿಕೊಂಡು ಫೈರಿಂಗ್ ಶುರುಮಾಡಿದರು.
ಕ್ಯಾಪ್ಟನ್ ವಿಕ್ರಮ್ ಬಾತ್ರಾ ಬಂದು ಅವರನ್ನು ಹಿಂದೆ ಸರಿಯುವಂತೆ ಸೂಚಿಸಿದರು. ಆದರೆ ಅವರಿಗೆ ಅವರ ಗುರಿ ಕೇವಲ ಗೆಲುವು ಆಗಿದ್ದರಿಂದ, ವಾಪಸ್ ತೆರಳಲು ನಿರಾಕರಿಸಿದರು. ಆಗ ಕ್ಯಾಪ್ಟನ್ ಬಾತ್ರಾ ಇಡಿಯ ಆಪರೇಶನ್ನನ್ನೇ ನಿಲ್ಲಿಸಲು ಕರೆಕೊಡುವುದಾಗಿ ಹೆದರಿಸಿದಾಗ, ಅವರು ಹಿಂದೆ ತೆವಳಲು ಪ್ರಾರಂಭಿಸಿದರು. ಹಿಂದೆ ಬಂದ ಅವರು ಒಂದು ಬಂಡೆಗೆ ಒರಗಿಕೊಂಡು, ಕಾಲಿನ ಪರಿಸ್ಥಿತಿ ಏನಾಗಿದೆ ಎಂದು ನೋಡಿದರು.
ಅವರ ವಿಂಟರ್ ಬೂಟಿನಿಂದ ರಕ್ತ ತುಂಬಿ ಹರಿಯುತ್ತಿತ್ತು, ಬೂಟು ತೆಗೆದು ನೋಡುತ್ತಾರೆ, ಕಾಲು ಬಹುತೇಕ ತುಂಡಾಗಿ ಕಳಚಿ ಬೀಳುವಂತಾಗಿದೆ. ಅವರನ್ನು ಹೊತ್ತೊಯ್ಯುತ್ತಿರುವಾಗ ನೋವಿನಿಂದ ಕಿರುಚುವುದನ್ನು ತಪ್ಪಿಸಲು ತಮ್ಮ ಸಮವಸ್ತ್ರವನ್ನು ಕಚ್ಚಿ ಹಿಡಿದಿದ್ದರವರು.
ಆಗಲೂ ಅವರಿಗೆ ಅವರ ಪ್ರಾಣದ ಕುರಿತು ಚಿಂತೆ ಆಗಲಿಲ್ಲ, ಬದಲಿಗೆ ಕಳಚಿದಂತಿದ್ದ ಕಾಲನ್ನೆ ನೋಡುತ್ತಿದ್ದರು. ಅಕಸ್ಮಾತ್ ಕಾಲು ಕಳಚಿ ಬಿದ್ದರೆ ಅದನ್ನು ಯಾರಾದರೂ ಎತ್ತಿಕೊಂಡು ಬಂದು ಡಾಕ್ಟರ ಬಳಿ ಕೊಟ್ರೆ, ಅವರು ಅದನ್ನು ಪುನಃ ಜೋಡಿಸುತ್ತಾರೆ, ಮತ್ತೆ ಯುದ್ಧವನ್ನು ಸೇರಿಕೊಳ್ಳಬಹುದು ಎಂಬ ಯೋಚನೆಯಲ್ಲಿ! ಅಬ್ಬಾ ಅದೆಂತಹ ಆತ್ಮಸ್ಥೈರ್ಯ!
ಆಸ್ಪತ್ರೆ ತಲುಪುವ ಹೊತ್ತಿಗೆ ಇವರಿಗೆ ಸರಿಯಾಗಿ ಪ್ರಜ್ಞೆಯೂ ಇರಲಿಲ್ಲ. ಮರುದಿನ ಬೆಳಿಗ್ಗೆ ಬಂದ ಹೆಲಿಕಾಪ್ಟರಿನಲ್ಲಿ ಶ್ರೀನಗರಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ತೆರಳುತ್ತಿದ್ದಾಗ, ಅವರ ಸಹಾಯಕ Point 4875ನ ತೋರಿಸಿದನಂತೆ, ಅಲ್ಲಿ ನಮ್ಮ ಧ್ವಜ ಹಾರಾಡುತ್ತಿತ್ತು. ತಕ್ಷಣ ಅವರಿದ್ದ ಸ್ಥಿತಿಯಲ್ಲೇ ಎದ್ದುನಿಂತು ಸೆಲ್ಯೂಟ್ ಮಾಡಿದರು. ಇನ್ನು ನನ್ನ ಜೀವ ಹೋದರೂ ಪರವಾಗಿಲ್ಲ ಎಂದು ನಿಟ್ಟುಸಿರುಬಿಟ್ಟರು! ವಾಹ್, ಅದೆಂತಹ ದೇಶ ಪ್ರೇಮ ಇರಬಹುದು ಅವರದ್ದು? ಆದರೆ ಕ್ಯಾಪ್ಟನ್ ವಿಕ್ರಂ ಭಾತ್ರಾ ಕೂಡ ವೀರಮರಣವನ್ನಪ್ಪಿದ ವಿಷಯ ಕೇಳಿ ಆಘಾತಗೊಂಡರು.
ದೆಹಲಿಯಲ್ಲಿ ಎಂಟು ಶಸ್ತ್ರಚಿಕಿತ್ಸೆಗಳಿಗೆ ಒಳಪಟ್ಟ ಇವರು, ಆರು ತಿಂಗಳುಗಳ ಕಾಲ ಹಾಸಿಗೆ ಹಿಡಿದಿದ್ದರು. ಒಟ್ಟು 21 ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಇದ್ದರು. ಜೀವನಪರ್ಯಂತ ಊರುಗೋಲು ಹಿಡಿದು ಓಡಾಡಬೇಕು ಎಂದು ವೈದ್ಯರು ಹೇಳಿದ್ದರು. ಆದರೆ ಇವರ ಆತ್ಮಸ್ಥೈರ್ಯದಿಂದ ಇವರು ಆರಾಮವಾಗಿ ಊರುಗೋಲು ಇಲ್ಲದೇ ನಡೆದಾಡಿಕೊಂಡಿದ್ದಾರೆ. ಇಂದಿಗೂ ಅವರು ರಕ್ಷಣಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಲೂ ಅವರನ್ನು ಕೇಳಿ, ತಾಯ್ನಾಡಿಗಾಗಿ ಸೇವೆ ಸಲ್ಲಿಸಲು ಈಗಲೇ ಹೊರಡಲು ಸಿದ್ಧ ಎಂದು ಹೇಳುತ್ತಾರೆ.
ಹಾ, ಅಷ್ಟೇ ಅಲ್ಲ, ಈಗ ಅವರು ನಾಡಿನುದ್ದಕ್ಕೂ ಸಂಚರಿಸುತ್ತಾ ಯುವ ಜನತೆಯನ್ನು ರಾಷ್ಟ್ರಸೇವೆಯತ್ತ ಪ್ರೇರೇಪಿಸುತ್ತಾ, ದೇಶ ಕಾಯುವ ಯೋಧರ ಕುರಿತು ಸ್ಪೂರ್ತಿ ತುಂಬುವ ಸತ್ಕಾರ್ಯ ಮಾಡುತ್ತಿದ್ದಾರೆ.