ಭಾರಿ ರಸ್ತೆ ಅಪಘಾತ – ಕೇರಳದ ಖ್ಯಾತ ಮಾಡೆಲ್ ಗಳಿಬ್ಬರ ಸಾವು
ಕೇರಳದ ಕೊಚ್ಚಿ ಬಳಿಯ ವೈಟಿಲ್ಲಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೇರಳದ ಮಾಜಿ ಸುಂದರಿ ಆನ್ಸಿ ಕಬೀರ್ ಮತ್ತು ಅದೇ ಸೌಂದರ್ಯ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದ ಅಂಜನಾ ಶಾಜನ್ ಅವರು ಕಾರು ಅಪಘಾತದಲ್ಲಿ ದುರ್ಮರಣಕ್ಕೆ ಈಡಾಗಿದ್ದಾರೆ.
ಆನ್ಸಿ ಕಬೀರ್ ಮತ್ತು ಅಂಜನಾ ಶಾಜನ್ ಅವರು ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಅವರ ಕಾರು ಮರಕ್ಕೆ ಗುದ್ದಿದ ಪರಿಣಾಮವಾಗಿ ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನಡೆದ ಈ ಅಪಘಾತದಲ್ಲಿ ಕಾರಿನಲ್ಲಿದ್ದ ಇತರ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಒಬ್ಬ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಮತ್ತೊಬ್ಬ ವ್ಯಕ್ತಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಚಾಲಕ ಮಾತ್ರ ಸೀಟ್ ಬೆಲ್ಟ್ ಹಾಕಿಕೊಂಡಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ.
ಕಬೀರ್ ಮತ್ತು ಶಾಜನ್ ಅವರು ಮಿಸ್ ಕೇರಳದ 108 ನೇ ಆವೃತ್ತಿಯಲ್ಲಿ ಕ್ರಮವಾಗಿ ಮೊದಲ ಮತ್ತು ದ್ವಿತೀಯ ಸ್ಥಾನ ಗಳಿಸಿದ್ದರು ಮತ್ತು ಒಳ್ಳೆಯ ಸ್ನೇಹಿತರಾಗಿದ್ದರು ಎಂದು ಅವರ ಸಂಬಂಧಿಕರು ಹೇಳಿದ್ದಾರೆ.