ರಾಜ್ಯದ ತುರ್ತು ಆರೋಗ್ಯ ಸೇವೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಇನ್ಮುಂದೆ 108 ಆಂಬುಲೆನ್ಸ್ ಸೇವೆ ನೇರವಾಗಿ ಕರ್ನಾಟಕ ಸರ್ಕಾರದ ಸುಪರ್ದಿಯಲ್ಲಿ ಕಾರ್ಯನಿರ್ವಹಿಸಲಿದೆ. ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ ಎಂಬ ಘೋಷವಾಕ್ಯದಡಿಯಲ್ಲಿ ಈ ಸೇವೆಯನ್ನು ಆರೋಗ್ಯ ಇಲಾಖೆ ನಿರ್ವಹಿಸಲಿದೆ.
ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರವೇ 108 ಆಂಬುಲೆನ್ಸ್ ಸೇವೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವುದು ಐತಿಹಾಸಿಕ ಹೆಜ್ಜೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲ ಹಾಗೂ ಪ್ರೋತ್ಸಾಹದಿಂದ ಈ ಯೋಜನೆ ಜಾರಿಗೆ ಬಂದಿದೆ ಎಂದರು.
2008ರಲ್ಲಿ ಸಾರ್ವಜನಿಕರ ತುರ್ತು ಆರೋಗ್ಯ ಸೇವೆಗೆ ನೆರವಾಗಲು 108 ಆಂಬುಲೆನ್ಸ್ ಸೇವೆ ಆರಂಭಿಸಲಾಗಿತ್ತು. ಇದುವರೆಗೆ ಖಾಸಗಿ ಸಂಸ್ಥೆಯೊಂದರಿಂದ ಈ ಸೇವೆ ನಿರ್ವಹಿಸಲಾಗುತ್ತಿತ್ತು. ಆದರೆ ಇದೀಗ ಸರ್ಕಾರವೇ ನೇರವಾಗಿ ಸೇವೆ ನಡೆಸಲು ಮುಂದಾಗಿರುವುದರಿಂದ, ಸೇವೆಯ ಗುಣಮಟ್ಟ ಮತ್ತು ತುರ್ತು ಸ್ಪಂದನೆ ಮತ್ತಷ್ಟು ಸುಧಾರಿಸುವ ನಿರೀಕ್ಷೆ ಮೂಡಿದೆ.
ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರಿಗೆ ವೇಗವಾದ ವೈದ್ಯಕೀಯ ನೆರವು ತಲುಪಿಸಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಆರೋಗ್ಯ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.








