ಕೊರೊನಾ ಲಾಕ್ ಡೌನ್ ಕಾರಣದಿಂದ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಸಿಐಎಸ್ಸಿಐ ಬೋರ್ಡ್ ಸಿಹಿ ಸುದ್ದಿಯೊಂದನ್ನು ನೀಡಿದೆ. ಸದ್ಯದಲ್ಲೇ ಎಲ್ಲಾ ಪರೀಕ್ಷೆಗಳು ನಡೆಯಲಿದ್ದು 8 ದಿನ ಮುಂಚಿತವಾಗಿ ಪ್ರಕಟಣೆ ಹೊರಡಿಸಲಾಗುವುದು ಎಂದು ತನ್ನ ಅಧಿಕೃತ ವೆಬ್ ಸೈಟ್ನಲ್ಲಿ ತಿಳಿಸಿದೆ.
10, 12ನೇ ತರಗತಿಗಳ ಪರೀಕ್ಷೆಯನ್ನು ಸದ್ಯದಲ್ಲೇ ನಡೆಸಲಾಗುವುದು ಎಂದು ಮಾಹಿತಿ ನೀಡಿರುವ ಸಿಐಎಸ್ಸಿಐ ಬೋರ್ಡ್ ಪರೀಕ್ಷೆ ನಡೆದ ಆರು ವಾರಗಳ ನಂತರ ಫಲಿತಾಂಶ ನೀಡುವುದಾಗಿ ಮಾಹಿತಿ ನೀಡಿದೆ. ಸಿಐಎಸ್ಸಿಐ ಬೋರ್ಡ್ನ 14 ಪರೀಕ್ಷೆಗಳು ನಡೆಯುವುದು ಬಾಕಿ ಇದ್ದು , ಈ ಪರೀಕ್ಷೆಗಳಿಗೆ ಸದ್ಯದಲ್ಲೇ ದಿನಾಂಕ ನಿಗದಿಪಡಿಸಲಾಗುವುದು. ಈಗಾಗಲೇ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ದಿನಾಂಕದ ಕುರಿತು ಹಲವಾರು ಗೊಂದಲಗಳು ಉಂಟಾಗಿದ್ದು, ಮತ್ತೊಮ್ಮೆ ಸಿದ್ಧತೆ ನಡೆಸಲು ಸಮಯಾವಕಾಶ ಬೇಕು ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ.
ಹೀಗಾಗಿ ಒಂದು ವಾರಗಳ ಮುಂಚೆಯೇ ಪರೀಕ್ಷಾ ವೇಳಾಪಟ್ಟಿ ವಿದ್ಯಾರ್ಥಿಗಳ ಕೈಸೇರಲಿದೆ ಎಂದು ಸಿಐಎಸ್ಸಿಐ ಬೋರ್ಡ್ ಮಾಹಿತಿ ನೀಡಿದೆ. ಹೆಚ್ಚಿನ ಮಾಹಿತಿಗಾಗಿ www.cisce.org ಸಂಪರ್ಕಿಸಿ.