ಹಾಸನ: 12 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಮರಗಳನ್ನು ನಾಶ ಮಾಡಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ನಿರ್ಲಕ್ಷ್ಯತೆ ವಹಿಸಿದ ಆರೋಪದ ಮೇಲೆ ಹಾಸನ (Hassan) ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ಅಮಾನತು ಆಗಿದ್ದಾರೆ. ಮೋಹನ್ ಕುಮಾರ್ ಅವರನ್ನು ಅಮಾನತುಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಸನ್ನ ಕುಮಾರ್.ವಿ ಆದೇಶ ಹೊರಡಿಸಿದ್ದಾರೆ.
ಡಿ.16 ರಂದು ಬೇಲೂರು ತಹಶೀಲ್ದಾರ್ ಮಮತಾ ಅವರ ಸಮಯ ಪ್ರಜ್ಞೆಯಿಂದಾಗಿ ಈ ಪ್ರಕರಣ ಬಯಲಿಗೆ ಬಂದಿತ್ತು. ಸಂಸದ ಪ್ರತಾಪ್ ಸಿಂಹ ಅವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣ ಮಹತ್ವ ಪಡೆದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ಕ್ರಮ ಕೈಗೊಂಡಿದ್ದಾರೆ.
ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅವರು ಶುಂಠಿ ಬೆಳೆಯುವ ಉದ್ದೇಶದಿಂದ ಗ್ರಾಮದ ಜಯಮ್ಮ ಎಂಬವರ ಮೂರು ಎಕರೆ ಜಾಗ ಗುತ್ತಿಗೆ ಪಡೆದಿದ್ದರು. ನಂತರ ಅಲ್ಲಿದ್ದ ಮರಗಳನ್ನು ಸೇರಿದಂತೆ ಸುತ್ತಲಿನ ಸುಮಾರು 12 ಎಕರೆ ಸರ್ಕಾರಿ ಗೋಮಾಳದಲ್ಲಿ ಬೆಳೆದಿದ್ದ ಅಮೂಲ್ಯ ಮರಗಳನ್ನು ಕಡಿದು ನಾಶ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಸದ್ಯ ಈ ಕುರಿತು ತನಿಖೆ ನಡೆಯುತ್ತಿದೆ.