ಐದು ವರ್ಷಗಳಲ್ಲಿ 125 ಆಸ್ಪತ್ರೆ ನಿರ್ಮಾಣ : ಸಚಿವ ಡಾ.ಕೆ.ಸುಧಾಕರ್
ತುಮಕೂರು : ಶಿಶು ಹಾಗೂ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಕೊಂಡೊಯ್ಯಲು ಮುಂದಿನ ಐದು ವರ್ಷಗಳಲ್ಲಿ ತಾಯಿ ಮತ್ತು ಮಕ್ಕಳ 125 ಹೊಸ ಆಸ್ಪತ್ರೆಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಶಿರಾದಲ್ಲಿ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಶಿಶು ಹಾಗೂ ತಾಯಂದಿರ ಮರಣ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಇದನ್ನು ಶೂನ್ಯವಾಗಿಸುವುದು ನಮ್ಮ ಗುರಿ. ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಹೃದಯ, ಮೂತ್ರಪಿಂಡ ಸಮಸ್ಯೆಯ ಚಿಕಿತ್ಸೆಗಾಗಿ ಆಸ್ಪತ್ರೆಗಳ ಪ್ರಾದೇಶಿಕ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಕೈಗಾರಿಕಾಭಿವೃದ್ಧಿ, ಆರೋಗ್ಯ, ಶಿಕ್ಷಣ ಅಭಿವೃದ್ಧಿಗೆ ಶಿರಾ ಸೂಕ್ತ ಪ್ರದೇಶ. ಸೈನಿಕರ ನಾಡಾಗಿದ್ದ ಈ ಪ್ರದೇಶ, ದೊಡ್ಡ ಸಾಮ್ರಾಜ್ಯದ ಭಾಗವಾಗಿತ್ತು. ಈ ಪ್ರದೇಶಕ್ಕೆ ಅಭಿವೃದ್ಧಿಯ ವೇಗ ನೀಡಲು 25 ಕೋಟಿ ರೂ. ಅನುದಾನದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ. ಜೊತೆಗೆ ವೈದ್ಯರು, ಶುಶ್ರೂಷಕರ ವಸತಿ ನಿರ್ಮಿಸಲಾಗಿದೆ ಎಂದರು.
ಅನೇಕ ಕಡೆ ವೈದ್ಯರು, ಸಿಬ್ಬಂದಿಗೆ ವಸತಿ ಇಲ್ಲದೆ ಆಸ್ಪತ್ರೆಯಿಂದ ದೂರ ಸಂಚರಿಸಬೇಕಾಗುತ್ತದೆ. ಇದರಿಂದಾಗಿ ವೈದ್ಯರ ಸೇವೆ ಸಮರ್ಪಕವಾಗಿ ಜನರಿಗೆ ದೊರೆಯುವುದಿಲ್ಲ. ವೈದ್ಯರು, ಸಿಬ್ಬಂದಿ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವಾಗ ದಯೆ, ಅನುಕಂಪ ರೂಢಿಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ದರ ಹೆಚ್ಚಾಗಿರುತ್ತದೆ. ಬಡವರು ಆರೋಗ್ಯ ಸೇವೆ ಪಡೆಯಲು ಸರ್ಕಾರಿ ಆರೋಗ್ಯ ಕೇಂದ್ರಗಳೇ ಆಶ್ರಯವಾಗಿರುತ್ತದೆ. ಬಡವರಿಗೆ ಉತ್ಕøಷ್ಟವಾದ ಆರೋಗ್ಯ ಸೇವೆ ನೀಡುವ ಜವಾಬ್ದಾರಿ ಆರೋಗ್ಯ ಸಿಬ್ಬಂದಿಯ ಮೇಲಿದೆ. ರೋಗಿಗಳನ್ನು ಕುಟುಂಬ ಸದಸ್ಯರಂತೆ ನೋಡಿಕೊಳ್ಳಬೇಕು. ಈ ರೀತಿ ವರ್ತಿಸಿದರೆ ವೈದ್ಯರ ಮೇಲಿನ ಗೌರವ ಹೆಚ್ಚುತ್ತದೆ ಎಂದು ಕಿವಿಮಾತು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು 24 ಗಂಟೆ ಸೇವೆ ನೀಡುವಂತೆ ಮಾಡಲಿದ್ದೇವೆ. ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದ ಕಡೆ, 9-10 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು, ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಚಿಂತನೆ ಇದೆ ಎಂದರು.
ಮಾರ್ಚ್ ನಲ್ಲಿ ಸಾಮಾನ್ಯ ಜನರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಜನರಲ್ಲಿ ವಿಶ್ವಾಸ ಬರಲು ಎಲ್ಲ ಇಲಾಖೆಗಳ ಸಿಬ್ಬಂದಿ ಲಸಿಕೆ ಪಡೆಯಬೇಕು. ಫೆಬ್ರವರಿ 28 ರೊಳಗೆ ಎಲ್ಲರೂ ಲಸಿಕೆ ಪಡೆಯಬೇಕು ಎಂದರು.
