ಭಾರತದಲ್ಲಿ ಈ ವರ್ಷ 13.9 ಲಕ್ಷ ಕ್ಯಾನ್ಸರ್ ಪ್ರಕರಣಗಳು
ಹೊಸದಿಲ್ಲಿ, ಅಗಸ್ಟ್ 19: ಭಾರತದಲ್ಲಿ ಈ ವರ್ಷ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 13.9 ಲಕ್ಷ ಎಂದು ಅಂದಾಜಿಸಲಾಗಿದೆ ಮತ್ತು 2025 ರ ವೇಳೆಗೆ ಇದು 15.7 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ಹೇಳಲಾಗಿದೆ.

ಮಹಿಳೆಯರಲ್ಲಿ ಕ್ಯಾನ್ಸರ್ ಹರಡುವಿಕೆಯು ಸ್ವಲ್ಪ ಹೆಚ್ಚಾಗಿದೆ ಎಂದು ವರದಿಯೊಂದು ತಿಳಿಸಿದೆ. ಭಾರತದಲ್ಲಿ ಐಸಿಎಂಆರ್ ಮತ್ತು ಬೆಂಗಳೂರು ಮೂಲದ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫಾರ್ಮ್ಯಾಟಿಕ್ಸ್ ಅಂಡ್ ರಿಸರ್ಚ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಪುರುಷರಲ್ಲಿ ಒಟ್ಟು ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 2020 ರಲ್ಲಿ 6,79,421 ಎಂದು ಅಂದಾಜಿಸಲಾಗಿದೆ ಮತ್ತು 2025 ರಲ್ಲಿ 7,63,575 ತಲುಪಬಹುದು ಎಂದು ಹೇಳಲಾಗಿದೆ.
2020 ರಲ್ಲಿ ಮಹಿಳೆಯರಲ್ಲಿ, ಒಟ್ಟು ಪ್ರಕರಣಗಳ ಸಂಖ್ಯೆ 7,12,758 ಎಂದು ಅಂದಾಜಿಸಲಾಗಿದೆ ಮತ್ತು 2025 ರಲ್ಲಿ 8,06,218 ತಲುಪುವ ಸಾಧ್ಯತೆಯಿದೆ. ಸ್ತನ ಕ್ಯಾನ್ಸರ್ (2,38,908) ಹೆಚ್ಚಿನ ಪ್ರಮಾಣದಲ್ಲಿದ್ದು, ನಂತರ ಶ್ವಾಸಕೋಶ ಕ್ಯಾನ್ಸರ್ (1,11,328) ಮತ್ತು ಗಂಟಲನಾಳ ಕ್ಯಾನ್ಸರ್ (90,060) ಸಾಮಾನ್ಯವಾಗಿ ಕಂಡುಬಂದಿರುವ ಕ್ಯಾನ್ಸರ್ ಗಳಾಗಿವೆ ಎಂದು ವರದಿ ತಿಳಿಸಿದೆ.

ಜನಸಂಖ್ಯೆ ಆಧಾರಿತ ಕ್ಯಾನ್ಸರ್ ದಾಖಲಾತಿಯಿಂದ ಮಾಹಿತಿ ಕಲೆಹಾಕಲಾಗಿದ್ದು, ಹೆಚ್ಚುವರಿಯಾಗಿ 58 ಆಸ್ಪತ್ರೆಗಳ ಕ್ಯಾನ್ಸರ್ ದಾಖಲಾತಿಯಿಂದ ದತ್ತಾಂಶ ಸೇರಿಸಲಾಗಿದೆ ಎಂದು ವರದಿ ತಿಳಿಸಿದೆ.








