14 ವರ್ಷಗಳ ಹಿಂದೆ, RCB ಜಗತ್ತಿಗೆ “ವಿರಾಟ್” ಕಾಲಿಟ್ಟ ದಿನವಿದು..
ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಜೀವಂತ ದಂತ ಕಥೆ . 2008 ಇಸವಿಯ ಇವತ್ತಿನ ದಿನದಂದು 19 ವರ್ಷದ ಹುಡುಗ ಆರ್ ಸಿ ಬಿ ತಂಡಕ್ಕೆ ಕಾಲಿಟ್ಟಾಗ ಈ ಹುಡುಗ ಇಷ್ಟು ದೊಡ್ಡ ಮಟ್ಟಕ್ಕೆ ಏರುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ಇಂದು ವಿಶ್ವ ಕ್ರಿಕೆಟ್ ಪುಸ್ತಕದಲ್ಲಿ ತನ್ನದೇ ಅಧ್ಯಾಯ ಬರೆಸಿದ್ದಾನೆ. ಆರ್ ಸಿ ಬಿ ಪರ 13 ಆವೃತ್ತಿಗಳನ್ನ ಪೂರೈಸಿ 14 ಆವೃತ್ತಿಗೆ ಕಾಲಿಟ್ಟಿದ್ದಾರೆ.
ಐಪಿಎಲ್ ವಿಷಯಕ್ಕೆ ಬಂದರೆ ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ (RCB) ತಂಡದ ಮಧ್ಯೆ ಅದೇನೋ ಅವಿನಾಭಾವ ಸಂಬಂಧವಿದೆ. ಆರ್‌ಸಿಬಿ ಎಂದರೆ ಸಾಕು ಕ್ರಿಕೆಟ್ ಪ್ರಿಯರ ಮನದಲ್ಲಿ ಮೊಟ್ಟ ಮೊದಲು ಮೂಡುವ ವ್ಯಕ್ತಿ ವಿರಾಟ್ ಕೊಹ್ಲಿ ಎಂದರೂ ತಪ್ಪಾಗಲಾರದು.
ಐಪಿಎಲ್ ನಲ್ಲಿ 14 ವರ್ಷ ಪೂರೈಸಿದ್ದಕ್ಕೆ RCB ಅಧಿಕೃತ ಟ್ವೀಟರ್ ಖಾತೆ ಪೋಸ್ಟ್ ಮಾಡಿ ಶುಭಾಶಯ ಕೋರಿ ಗೌರವ ಸೂಚಿಸಿದೆ. ಶುರುವಿನಿಂದ ಇಲ್ಲಿಯವರೆಗೆ ಒಂದೇ ತಂಡದ ಪರ ಆಡಿದ ಮೊದಲ ಆಟಗಾರ ವಿರಾಟ್ ಕೊಹ್ಲಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಬಾರಿಗೆ ವಿರಾಟ್ ಅವರನ್ನು 12 ಲಕ್ಷ ರೂಪಾಯಿ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ತದನಂತರ ವಿರಾಟ್ ಅವರು ಪ್ರತಿ ಐಪಿಎಲ್ ಸರಣಿಗಳಲ್ಲೂ ಆರ್‌ಸಿಬಿ ತಂಡವನ್ನೇ ಪ್ರತಿನಿಧಿಸಿದ್ದಾರೆ. ಇನ್ನೇನು ಐಪಿಎಲ್ 2022 ಶುರು ಆಗಬೇಕಿದೆ. ವಿರಾಟ್ ಅವರನ್ನು ಈಗಲೂ ಆರ್‌ಸಿಬಿ ತಂಡ 15 ಕೋಟಿ ರೂಪಾಯಿ ನೀಡಿ ತನ್ನ ತಂಡದಲ್ಲೇ ಇರಿಸಿಕೊಂಡಿದೆ. ಇತ್ತೀಚಿಗಷ್ಟೆ ನಾಯಕತ್ವದಿಂದ ಕೆಳಗಿಳಿದಿರುವ ವಿರಾಟ್ ಮತ್ತೊಮ್ಮೆ ಕ್ಯಾಪ್ಟನ್ಸಿ ಪಟ್ಟಕ್ಕೇರುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.








