ಕಬ್ಬು ಬೆಲೆ ಏರಿಕೆ ಹಾಗೂ ಬಾಕಿ ಪಾವತಿ ಕುರಿತ ಬೇಡಿಕೆಗಾಗಿ ಬಾಗಲಕೋಟೆಯ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಪ್ರತಿಭಟನೆ ಕಳೆದ ವಾರ ಹಿಂಸೆಗೆ ತಿರುಗಿತ್ತು. ಈ ಘಟನೆಯ ಬಗ್ಗೆ ಮಹಾಲಿಂಗಪುರ ಪೊಲೀಸರು ನಡೆಸಿದ ತನಿಖೆಯಲ್ಲಿ ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿದ್ದು, ಒಟ್ಟು 17 ಮಂದಿಯನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆ ಹಾಗೂ ವಿಡಿಯೋ ಪರಿಶೀಲನೆ ಆಧರಿಸಿ, ಘಟನೆಗೆ ರೈತರು ಕಾರಣವಲ್ಲ, ಹೊರಗಿನ ಕಿಡಿಗೇಡಿಗಳೇ ಹಿಂಸಾಚಾರಕ್ಕೆ ಕಾರಣ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ರೈತರ ಪರ ನಿಂತು 13 ಜನ ಕಲ್ಲು ತೂರಿದ್ದಾರೆ. ಕಾರ್ಖಾನೆ ಪರ ನಿಂತು 4 ಜನ ಕೂಡ ಕಲ್ಲು ತೂರಿದ್ದಾರೆ. ಇವರೆಲ್ಲರೂ ರೈತರ ಹೆಸರಿನಿಂದ ಗಲಭೆ ಸೃಷ್ಟಿಸಲು ಪ್ರಯತ್ನಿಸಿದವರು ಎಂದು ತನಿಖೆಯಲ್ಲಿ ದೃಢಪಟ್ಟಿದೆ.
ಬಂಧಿತರಾದ ಹಲವರು ತಮ್ಮ ತಪ್ಪನ್ನು ತನಿಖೆಯ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಇದರಿಂದಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಕೆಲವು ಶಂಕಿತ ವ್ಯಕ್ತಿಗಳಿಗಾಗಿ ಹುಡುಕಾಟ ಮುಂದುವರಿಸಿದ್ದು, ಪ್ರತಿಭಟನೆ ಹಿನ್ನಲೆಯಲ್ಲಿ ಶಾಂತಿ ಕಾಪಾಡಲು ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.








