ವಿಜಯಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗೆ ಕಾಪಿ ಚೀಟಿ ನೀಡಲು ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದ ಯುವಕ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ವಿಶ್ವಚೇತನ ಪ್ರೌಢಶಾಲೆಯಲ್ಲಿ ಇಂದು ಗಣಿತ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗೆ ಕಾಪಿ ಚೀಟಿ ನೀಡಲು ತಾಲೂಕಿನ ಕಾನಾಳ ಗ್ರಾಮದ ಸಾಗರ ಚಲವಾದಿ ಎಂಬ 19 ವರ್ಷದ ಯುವಕ ಹೋಗಿದ್ದ. ಈ ವೇಳೆ ಯುವಕನ ಹಿಡಿಯಲು ಬೆನ್ನತ್ತಿದ್ದ ಪೊಲೀಸರು ಲಾಠಿ ಬೀಸಿದ್ದಾರೆ. ಈ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈತ ಮೊದಲೇ ಹೃದಯ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ. ಪೊಲೀಸರು ಬೆನ್ನತ್ತಿದ್ದಾಗ ಗಾಬರಿಗೊಂಡು ಯುವಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸತ್ಯಾಸತ್ಯತೆ ತಿಳಿಯಲಿದೆ.
ಪೊಲೀಸರ ಹಲ್ಲೆಯಿಂದ ಸಾವು: ಪೋಷಕರ ಆರೋಪ
ಸಾಗರ ಚಲವಾದಿ ಕಾಪಿ ಚೀಟಿ ಕೊಡಲು ಹೋಗಿ ಮೃತಪಟ್ಟಿಲ್ಲ. ತನ್ನ ಸಹೋದರಿಯನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಬಿಡಲು ಹೋಗಿದ್ದ. ಪೊಲೀಸರ ಹಲ್ಲೆಯಿಂದ ಗಾಯಗೊಂಡು ಮೃತಪಟ್ಟಿದ್ದಾನೆ ಎಂದು ಸಾಗರ್ ಪೋಷಕರು ಆರೋಪಿಸಿದ್ದಾರೆ.
ಆದರೆ, ಸಾಗರ್ ಸ್ನೇಹಿತ ಶಿವಪ್ಪನ ಪ್ರಕಾರ ಆತನಿಗೆ ಆರೋಗ್ಯ ಸಮಸ್ಯೆ ಇತ್ತು. ಪರೀಕ್ಷಾ ಕೇಂದ್ರ ದಾರಿಯಲ್ಲೇ ನಾವು ತೆರಳುತ್ತಿದ್ದೆವು. ಈ ವೇಳೆ ಪೊಲೀಸರು ನಮ್ಮ ಬೈಕ್ ತಡೆದು ಲಾಠಿಯಿಂದ ಹೊಡೆದರು ಎಂದು ಹೇಳಿದ್ದಾನೆ.