ತಮಿಳುನಾಡಿನಲ್ಲಿ  ಮುಗುಚಿ ಬಿದ್ದ ರಥ – ಇಬ್ಬರ ಸಾವು ಹಲವರಿಗೆ ಗಾಯ

1 min read

ತಮಿಳುನಾಡಿನಲ್ಲಿ  ಮುಗುಚಿ ಬಿದ್ದ ರಥ – ಇಬ್ಬರ ಸಾವು ಹಲವರಿಗೆ ಗಾಯ

ಸೋಮವಾರ ಸಂಜೆ ದೇವಸ್ಥಾನದ ರಥವೊಂದು ಕುಸಿದು ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಡೆದಿದೆ. ಹಲವು  ಭಕ್ತರು ರಥದ  ಕೆಳಗೆ ಸಿಲುಕಿದ್ದಾರೆ.

ಸೋಮವಾರ ಸಂಜೆ ಪಾಪರಪಟ್ಟಿಯ ಮದೇಹಳ್ಳಿಯ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ.  ವೈಕಾಸಿ ಹಬ್ಬದ ಅಂಗವಾಗಿ ಸಂಜೆ 6.30ರ ಸುಮಾರಿಗೆ ಕಾಳಿಯಮ್ಮನ ದೇವಸ್ಥಾನದ 30 ಅಡಿಯ ರಥವನ್ನು ಬೀದಿಗಳಲ್ಲಿ  ಎಳೆಯುವಾಗ ಮುಗುಚಿ ಬಿದ್ದು  ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ರಥ ಕುಸಿದು ಬಿದ್ದ ವೀಡಿಯೋ ವೈರಲ್ ಆಗಿದೆ.  ಕುಸಿದ ರಥದ ಕೆಳಗೆ ಸಿಕ್ಕಿಬಿದ್ದವರನ್ನ  ರಕ್ಷಿಸಲು ಜನರು ಕಿರುಚುತ್ತಾ ಓಡುವುದನ್ನ  ವೀಡಿಯೊದಲ್ಲಿ ನೋಡಬಹುದು.

ಮಾಧ್ಯಮಗಳೊಂದಿಗೆ  ಮಾತನಾಡಿದ ಧರ್ಮಪುರಿ ಪೊಲೀಸ್ ವರಿಷ್ಠಾಧಿಕಾರಿ ಸಿ ಕಲೈಸೆಲ್ವನ್, ರಥದ ಚಕ್ರಗಳ ಅಡಿಯಲ್ಲಿ ಸಿಲುಕಿದ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಮತ್ತು ಅವರನ್ನು ಧರ್ಮಪುರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆಯ ಕುರಿತು ತನಿಖೆ ಆರಂಭಿಸಿದ್ದೇವೆ  ಎಂದು ತಿಳಿಸಿದ್ದಾರೆ.

ಧರ್ಮಪುರಿ ಸಂಸದ ಡಾ.ಎಸ್.ಸೆಂಥಿಲ್ಕುಮಾರ್ ಹಾಗೂ ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನ ವಿಚಾರಿಸಿದ್ದಾರೆ.  ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಘಟನೆಗೆ ಸಂತಾಪ ಸೂಚಿಸಿದ್ದಾರೆ. ಮನೋಹರನ್ (57) ಮತ್ತು ಸರವಣನ್ (50) ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ ಮತ್ತು ಗಾಯಾಳುಗಳಿಗೆ ಧರ್ಮಪುರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲು ಆದೇಶಿಸಿದ್ದೇನೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd