ಬಾಗಲಕೋಟೆ: ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಲಾಕ್ಡೌನ್ ಮಾಡಿದ ನಂತರ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ)ಗೆ 2 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಗೋವಿಂದ ಕಾಜೋಳ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಲಕ್ಷ್ಮಣ್ ಸವದಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸುಮಾರು ಒಂದು ಕೋಟಿ ಜನರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತಿದೆ. ಪ್ರತಿದಿನ ಒಂದು ಕೋಟಿ ಜನ ರಾಜ್ಯದಲ್ಲಿ ಸಂಚಾರ ಮಾಡ್ತಿದ್ರು. ಇಂದು ಕೇವಲ ಹದಿನೈದು ಲಕ್ಷ ಜನ ಸಂಚಾರ ಮಾಡ್ತಿದ್ದಾರೆ. ಹೀಗಾಗಿ ಸಂಸ್ಥೆಗೆ 2 ಸಾವಿರ ಕೋಟಿಯಷ್ಟು ಹಾಣಿಯಾಗಿದೆ ಎಂದರು.
ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಕೆಎಸ್ಆರ್ಸಿಗೆ ಬಹುದೊಡ್ಡ ಹಾನಿಯಾಗಿದೆ. ಹಾನಿ ಕಡಿಮೆ ಮಾಡಲು ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು. ಸಂಸ್ಥೆ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಿಬ್ಬಂದಿಗಳಿಗೆ ಸಂಬಳ ನೀಡಲು ಹಣ ಇರಲಿಲ್ಲ. ಮುಖ್ಯಮಂತ್ರಿಗಳು ಸುಮಾರು 651 ಕೋಟಿಯಷ್ಟು ಹಣ ಬಿಡುಗಡೆ ಮಾಡಿದ್ದಾರೆ. ಮುಂದಿನ ತಿಂಗಳು ಸಂಬಳ ಕೊಡಲು ಕಷ್ಟ ಸಾಧ್ಯವಾಗಬಹುದು ಎಂದು ಹೇಳಿದ್ದಾರೆ.
ಸಾರಿಗೆ ಇಲಾಖೆ ಸಿಬ್ಬಂದಿ ಕೊರೋನಾದಿಂದ ಮೃತಪಟ್ಟರೆ, ನಿಗಮದಿಂದ 30 ಲಕ್ಷ ರೂ. ಪರಿಹಾರ ಕೊಡಲು ನಿರ್ಧರಿಸಿದ್ದೇವೆ ಎಂದು ಸವದಿ ವಿವರ ನೀಡಿದರು.








