ಕೊಲಂಬೋ: 2011ರಲ್ಲಿ ಮುಂಬೈನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಯಾವುದೇ ಮ್ಯಾಚ್ ಫಿಕ್ಸಿಂಗ್ ನಡೆದಿಲ್ಲ. ಹೀಗಾಗಿ ತನಿಖೆಯನ್ನು ಅಂತ್ಯಗೊಳಿಸಲಾಗಿದೆ ಎಂದು ತನಿಖಾ ತಂಡ ಸ್ಪಷ್ಟನೆ ನೀಡಿದೆ.
ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ಶ್ರೀಲಂಕಾ ಕ್ರೀಡಾ ಇಲಾಖೆ ವಿಶೇಷ ತನಿಖಾ ತಂಡ ರಚಿಸಿತ್ತು. ತನಿಖಾ ತಂಡ ತನ್ನ ತನಿಖೆ ಪೂರ್ಣಗೊಳಿಸಿದ್ದು, ಕುಮಾರ ಸಂಗಕ್ಕರ, ಮಹೇಲಾ ಜಯವರ್ಧನೆಗೆ ಕ್ಲೀನ್‍ಚಿಟ್ ನೀಡಿದೆ.
ಈ ಸಂಬಂಧ ಅಂದಿನ ಅಂಕಾ ತಂಡದ ಆಟಗಾರರಾದ ಕುಮಾರ ಸಂಗಕ್ಕರ, ಮಹೇಲಾ ಜಯವರ್ಧನೆ, ಅರವಿಂದ ಡ ಸಿಲ್ವಾ ಅವರನ್ನು ತನಿಖಾ ತಂಡ ವಿಚಾರಣೆ ನಡೆಸಿತ್ತು. ವಿಚಾರಣೆ ಬಳಿಕ ತನಿಖೆಯನ್ನು ಕ್ಲೋಸ್ ಮಾಡಲಾಗಿದೆ ಶ್ರೀಲಂಕಾ ಕ್ರಿಕೆಟ್ ಸಂಸ್ಥೆಯ ಜಗನ್ನಾಥ್ ಫೊನ್ಸೆಕಾ ತಿಳಿಸಿದ್ದಾರೆ.

2011ರ ಏಪ್ರಿಲ್ 2ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಜಯಿಸುವ ಮೂಲಕ ಭಾರತ 2ನೇ ಬಾರಿಗೆ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿ ದಕ್ಕಿಸಿಕೊಂಡಿತ್ತು. ಆದರೆ, ಈ ಪಂದ್ಯ ಮ್ಯಾಚ್ ಫಿಕ್ಸಿಂಗ್ ಆಗಿತ್ತು. ಭಾರತ ಗೆಲ್ಲಲೆಂದೇ ಲಂಕಾ ಆಟಗಾರರು ಕಳಪೆ ಆಟ ಆಡಿದ್ದರು. ಕ್ರೀಡಾ ಸಚಿವನಾಗಿ ನಾನು ಕೂಡ ಫೈನಲ್ ಪಂದ್ಯ ನಡೆಯುತ್ತಿದ್ದ ವಾಂಖೆಡೆ ಮೈದಾನದಲ್ಲಿ ಇದ್ದೆ ಎಂದು ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿದಾನಂದ ಅಲುಥಗಮಗೆ ಆರೋಪ ಮಾಡಿದ್ದರು.
ಈ ಆರೋಪ ಹಿನ್ನೆಲೆಯಲ್ಲಿ ಲಂಕಾ ಕ್ರೀಡಾ ಇಲಾಖೆ ತನಿಖೆಗೆ ವಿಶೇಷ ತಂಡ ರಚಿಸಿತ್ತು.








