ಸಿನಿಮಾ ಎನ್ನುವುದು ಬಣ್ಣದ ಲೋಕ ಮಾತ್ರವಲ್ಲ ಅದೊಂದು ಭಯಾನಕ ಜೂಜು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಬೆಳ್ಳಿಪರದೆ ಮೇಲೆ ಅದೃಷ್ಟ ಪರೀಕ್ಷೆಗೆ ಇಳಿದವರು ರಾತ್ರೋರಾತ್ರಿ ಕುಬೇರರಾಗುವುದು ಎಷ್ಟು ಸತ್ಯವೋ ಅಷ್ಟೇ ವೇಗವಾಗಿ ಪಾತಾಳಕ್ಕೆ ಕುಸಿಯುವುದು ಕೂಡ ಕಟುಸತ್ಯ. 2025ರ ಸಾಲಿನಲ್ಲಿ ಭಾರತೀಯ ಚಿತ್ರರಂಗದ ಲೆಕ್ಕಾಚಾರವೇ ಬುಡಮೇಲಾಗಿದೆ. ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್ ಹಾಗೂ ಮಾಲಿವುಡ್ ಅಂಗಳದಲ್ಲಿ ಸ್ಟಾರ್ ಡಮ್ ನಂಬಿಕೊಂಡು ಬಂದ ಎಷ್ಟೋ ಸಿನಿಮಾಗಳು ಈ ವರ್ಷ ಬಾಕ್ಸಾಫೀಸ್‌ನಲ್ಲಿ ಉಸಿರು ಚೆಲ್ಲಿವೆ.
ಕೇವಲ ಸ್ಟಾರ್ ನಟರ ಕಟೌಟ್ ನೋಡಿ, ಹಾಲಿನ ಅಭಿಷೇಕ ಮಾಡಿ ಸಿನಿಮಾ ನೋಡುವ ಕಾಲ ಹೋಯಿತು. ಕಂಟೆಂಟ್ ಇಲ್ಲದಿದ್ದರೆ ಎಂತ ದೊಡ್ಡ ಸೂಪರ್ ಸ್ಟಾರ್ ಸಿನಿಮಾ ಆದರೂ ಪ್ರೇಕ್ಷಕ ಪ್ರಭು ತಿರಸ್ಕರಿಸುತ್ತಾನೆ ಎಂಬುದಕ್ಕೆ 2025 ಸಾಕ್ಷಿಯಾಗಿದೆ. ಸಲ್ಮಾನ್ ಖಾನ್, ರಾಮ್‌ಚರಣ್, ಪವನ್ ಕಲ್ಯಾಣ್, ಕಮಲ್ ಹಾಸನ್ ಅಂತಹ ದಿಗ್ಗಜ ನಟರ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ. ನಿರ್ಮಾಪಕರ ಜೇಬಿಗೆ ಕತ್ತರಿ ಬಿದ್ದಿದೆ. ಅಬ್ಬಬ್ಬಾ ಎನ್ನುವಂತೆ ಹೈಪ್ ಕ್ರಿಯೇಟ್ ಮಾಡಿ ಅಷ್ಟೇ ಹೀನಾಯವಾಗಿ ಸೋಲುಂಡ ಆ ಟಾಪ್ 10 ಸಿನಿಮಾಗಳ ವಿವರ ಇಲ್ಲಿದೆ ನೋಡಿ.
1. ಸಿಕಂದರ್: ಬಾಕ್ಸಾಫೀಸ್ ಸುಲ್ತಾನನಿಗೆ ಬಲವಾದ ಪೆಟ್ಟು
ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಹಾಗೂ ಗಜಿನಿ ಖ್ಯಾತಿಯ ಎ ಆರ್ ಮುರುಗದಾಸ್ ಕಾಂಬಿನೇಷನ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ರಶ್ಮಿಕಾ ಮಂದಣ್ಣ ಸಾಥ್ ನೀಡಿದ್ದ ಈ ಆಕ್ಷನ್ ಥ್ರಿಲ್ಲರ್ ಬಾಕ್ಸಾಫೀಸ್‌ನಲ್ಲಿ ಮ್ಯಾಜಿಕ್ ಮಾಡುವಲ್ಲಿ ವಿಫಲವಾಯಿತು. ಸಾಜಿದ್ ನಾಡಿಯಾದ್ವಾಲಾ ಅವರ ಕೋಟಿ ಕೋಟಿ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಸಿನಿಮಾ ಸೋಲಿನ ಬಳಿಕ ನಿರ್ದೇಶಕ ಮತ್ತು ನಟರ ನಡುವಿನ ಆರೋಪ ಪ್ರತ್ಯಾರೋಪಗಳು ಬೀದಿಗೆ ಬಂದಿದ್ದವು. 2025ರ ಬಹುನಿರೀಕ್ಷಿತ ಚಿತ್ರವಾಗಿದ್ದ ಇದು ರಿಲೀಸ್‌ಗೂ ಮುನ್ನವೇ ಪೈರಸಿ ಭೂತಕ್ಕೆ ಬಲಿಯಾಗಿ ದೊಡ್ಡ ಹೊಡೆತ ನೀಡಿತು. ಬರೋಬ್ಬರಿ 90 ಕೋಟಿ ರೂಪಾಯಿ ನಷ್ಟ ಅನುಭವಿಸಿ ಸಿಕಂದರ್ ಸೋಲೊಪ್ಪಿಕೊಂಡಿತು.
2. ಗೇಮ್ ಚೇಂಜರ್: ಶಂಕರ್ ಲೆಕ್ಕಾಚಾರ ಉಲ್ಟಾ ಪಲ್ಟಾ
ಗ್ಲೋಬಲ್ ಸ್ಟಾರ್ ರಾಮ್‌ಚರಣ್ ಮತ್ತು ಬ್ರಹ್ಮಾಂಡ ನಿರ್ದೇಶಕ ಶಂಕರ್ ಒಂದಾಗಿದ್ದಾರೆ ಎಂದಾಗ ಭಾರತೀಯ ಚಿತ್ರರಂಗವೇ ತಿರುಗಿ ನೋಡಿತ್ತು. 2025ರ ಸಂಕ್ರಾಂತಿ ಹಬ್ಬಕ್ಕೆ ಬಂದ ಈ ಚಿತ್ರ ಬಾಕ್ಸಾಫೀಸ್‌ನ ಗೇಮ್ ಬದಲಿಸುವ ಬದಲು ನಿರ್ಮಾಪಕ ದಿಲ್ ರಾಜು ಅವರ ಹಣೆಬರಹವನ್ನೇ ಬದಲಿಸಿತು. ಚರಣ್ ದ್ವಿಪಾತ್ರ ಮತ್ತು ಕಿಯಾರಾ ಗ್ಲಾಮರ್ ಕೂಡ ಸಿನಿಮಾವನ್ನು ಉಳಿಸಲಿಲ್ಲ. ಫಿಲ್ಮ್ ನಗರ್ ಮೂಲಗಳ ಪ್ರಕಾರ ಈ ಚಿತ್ರ ಬರೋಬ್ಬರಿ 100 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಹೇಳಲಾಗುತ್ತಿದೆ.
3. ಥಗ್ ಲೈಫ್: ಮಣಿರತ್ನಂ ಮ್ಯಾಜಿಕ್ ವರ್ಕೌಟ್ ಆಗಲಿಲ್ಲ
ನಾಯಗನ್ ನಂತರ ಕಮಲ್ ಹಾಸನ್ ಮತ್ತು ಮಣಿರತ್ನಂ ಜೋಡಿ ಮತ್ತೆ ಒಂದಾಗಿದ್ದೇ ಒಂದು ಸಂಚಲನವಾಗಿತ್ತು. ಆದರೆ ಥಗ್ ಲೈಫ್ ಬಾಕ್ಸಾಫೀಸ್‌ನಲ್ಲಿ ಲೈಫ್ ಕಂಡುಕೊಳ್ಳುವಲ್ಲಿ ಸೋತಿತು. ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಕಮಲ್ ಹಾಸನ್ ಹೇಳಿಕೆಗಳು ಕೂಡ ಸಿನಿಮಾದ ಮೇಲೆ ಪರಿಣಾಮ ಬೀರಿತು. ಸ್ವತಃ ಕಮಲ್ ನಿರ್ಮಾಣದ ಈ ಚಿತ್ರ ಅಂದಾಜು 100 ಕೋಟಿ ನಷ್ಟದ ಸುಳಿಗೆ ಸಿಲುಕಿತು. ಸಿಂಬು ಮತ್ತು ತ್ರಿಷಾ ಇದ್ದರೂ ಚಿತ್ರವನ್ನು ದಡ ಸೇರಿಸಲಾಗಲಿಲ್ಲ.
4. ವಾರ್ 2: ಸ್ಟಾರ್ ವಾರ್ ನಲ್ಲಿ ಸೋತ ಹೃತಿಕ್ ಎನ್‌ಟಿಆರ್
2025ರ ಸ್ವಾತಂತ್ರ್ಯ ದಿನಾಚರಣೆಯಂದು ತೆರೆಕಂಡ ಬಾಲಿವುಡ್ ಮತ್ತು ಟಾಲಿವುಡ್ ಸ್ಟಾರ್‌ಗಳ ಸಂಗಮದ ವಾರ್ 2 ನಿರೀಕ್ಷೆಯ ಮಟ್ಟ ಮುಟ್ಟಲಿಲ್ಲ. ಹೃತಿಕ್ ರೋಷನ್ ಮತ್ತು ಜ್ಯೂ ಎನ್‌ಟಿಆರ್ ಅಬ್ಬರಕ್ಕೆ ರಜನಿಕಾಂತ್ ಅವರ ಕೂಲಿ ಸಿನಿಮಾ ಅಡ್ಡಗಾಲಾಗಿ ನಿಂತಿತು. ಸ್ಪೈ ಯೂನಿವರ್ಸ್‌ನ ಈ ಅದ್ದೂರಿ ಚಿತ್ರ ನಿರ್ಮಾಪಕರಿಗೆ 60 ರಿಂದ 70 ಕೋಟಿ ರೂಪಾಯಿ ನಷ್ಟ ತಂದಿಟ್ಟಿತು ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕಿದ್ದಾರೆ.
5. ಎಮರ್ಜೆನ್ಸಿ: ಕಂಗನಾ ಕ್ರಾಂತಿ ನಡೆಯಲಿಲ್ಲ
ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ಅವರ ಮಹತ್ವಾಕಾಂಕ್ಷೆಯ ಎಮರ್ಜೆನ್ಸಿ ಚಿತ್ರ 2025ರ ಆರಂಭದಲ್ಲೇ ತೆರೆಗೆ ಬಂದು ವಿವಾದಗಳಿಂದಲೇ ಸುದ್ದಿ ಮಾಡಿತ್ತು. ಆದರೆ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಲ್ಲದೆ ಬಿಕೋ ಎನ್ನುವಂತಾಯಿತು. 60 ಕೋಟಿ ಬಜೆಟ್‌ನ ಈ ಚಿತ್ರ ಕೇವಲ 20 ಕೋಟಿ ಗಳಿಸಲು ಹೆಣಗಾಡಿತು. ಪುಣ್ಯಕ್ಕೆ ನೆಟ್‌ಫ್ಲಿಕ್ಸ್ ಸಂಸ್ಥೆ ದೊಡ್ಡ ಮೊತ್ತಕ್ಕೆ ಓಟಿಟಿ ಹಕ್ಕು ಖರೀದಿಸಿದ್ದರಿಂದ ನಿರ್ಮಾಪಕರು ಸ್ವಲ್ಪ ನಿಟ್ಟುಸಿರು ಬಿಡುವಂತಾಯಿತು.
6. ಹರಿಹರ ವೀರಮಲ್ಲು: ಪವರ್ ಸ್ಟಾರ್ ಅಭಿಮಾನಿಗಳಿಗೆ ನಿರಾಸೆ
ಆಂಧ್ರ ರಾಜಕೀಯದಲ್ಲಿ ಪವನ್ ಕಲ್ಯಾಣ್ ಗೆದ್ದಿರಬಹುದು ಆದರೆ ಸಿನಿಮಾ ರಂಗದಲ್ಲಿ ಈ ವರ್ಷ ಅವರಿಗೆ ಲಕ್ ಕೈಕೊಟ್ಟಿದೆ. ಬಹುಕಾಲದಿಂದ ನಿರ್ಮಾಣ ಹಂತದಲ್ಲಿದ್ದ ಹರಿಹರ ವೀರಮಲ್ಲು ಅಂತಿಮವಾಗಿ 2025ರಲ್ಲಿ ತೆರೆಕಂಡಾಗ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಜೆಟ್ ಮಿತಿ ಮೀರಿದ್ದರಿಂದ ಚಿತ್ರ ಭಾರೀ ನಷ್ಟ ಅನುಭವಿಸಿತು. ಇತ್ತ ಒಜಿ ಚಿತ್ರಕ್ಕೆ ಒಳ್ಳೆಯ ಟಾಕ್ ಸಿಕ್ಕರೂ ಕಮರ್ಷಿಯಲ್ ಆಗಿ ನಿರ್ಮಾಪಕರಿಗೆ ನಷ್ಟವಾಯಿತು ಎನ್ನಲಾಗುತ್ತಿದೆ.
7. ಕಣ್ಣಪ್ಪ: ಭಕ್ತಿ ಚಿತ್ರಕ್ಕೆ ಸಿಗಲಿಲ್ಲ ಮುಕ್ತಿ
ಮಂಚು ವಿಷ್ಣು ಮಹತ್ವಾಕಾಂಕ್ಷೆಯ ಕಣ್ಣಪ್ಪ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಮೋಹನ್ ಬಾಬು ನಿರ್ಮಾಣದ ಈ ಚಿತ್ರದಲ್ಲಿ ಸ್ಟಾರ್‌ಗಳ ದಂಡೇ ಇತ್ತು. ಕನ್ನಡದ ಶಿವಮೆಚ್ಚಿನ ಕಣ್ಣಪ್ಪ ಚಿತ್ರದಿಂದ ಸ್ಫೂರ್ತಿ ಪಡೆದಿದ್ದರೂ ಮೇಕಿಂಗ್ ಮತ್ತು ಕಥೆಯಲ್ಲಿ ಎಡವಿದ ಪರಿಣಾಮ ಬಾಕ್ಸಾಫೀಸ್‌ನಲ್ಲಿ ಹೀನಾಯ ಸೋಲು ಕಂಡಿತು.
8. ರೆಟ್ರೋ: ಸೂರ್ಯ ಪ್ರಯೋಗ ವಿಫಲ
ತಮಿಳು ನಟ ಸೂರ್ಯ ಅವರ ವಿಭಿನ್ನ ಪ್ರಯತ್ನದ ರೆಟ್ರೋ ಸಿನಿಮಾ ಪ್ರೇಕ್ಷಕರ ತಲೆಗೆ ಹೋಗಲಿಲ್ಲ. ಕನ್ನಿಮಾ ಹಾಡು ಸೃಷ್ಟಿಸಿದ ಹೈಪ್ ಸಿನಿಮಾ ಉಳಿಸಲು ಸಾಲಲಿಲ್ಲ. ಪೂಜಾ ಹೆಗ್ಡೆ ಮತ್ತು ಸೂರ್ಯ ಕೆಮಿಸ್ಟ್ರಿ ವರ್ಕೌಟ್ ಆದರೂ ಕಥೆಯಲ್ಲಿನ ದೋಷದಿಂದ ಸಿನಿಮಾ ನೆಲಕಚ್ಚಿತು.
ಇನ್ನುಳಿದಂತೆ ತಲಾ ಅಜಿತ್ ಅವರ ವಿಡಾಮುಯರ್ಚಿ, ವಿಜಯ್ ದೇವರಕೊಂಡ ನಟನೆಯ ಕಿಂಗ್‌ಡಮ್, ಚಿಯಾನ್ ವಿಕ್ರಂ ಅಭಿನಯದ ವೀರಧೀರ ಶೂರನ್, ರಾಮ್ ಪೊತಿನೇನಿ ಅವರ ಆಂಧ್ರಕಿಂಗ್ ತಾಲೂಕ, ದುಲ್ಕರ್ ಸಲ್ಮಾನ್ ನಟನೆಯ ಕಾಂತ ಹಾಗೂ ಮಮ್ಮುಟಿ ಅವರ ಬಾಜೂಕಾ ಸಿನಿಮಾಗಳು ಕೂಡ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡದೆ ಸೋಲೊಪ್ಪಿಕೊಂಡಿವೆ. ಒಟ್ಟಿನಲ್ಲಿ 2025ನೇ ಇಸವಿ ದೊಡ್ಡ ಬಜೆಟ್ ಮತ್ತು ಸ್ಟಾರ್ ನಟರ ಸಿನಿಮಾಗಳಿಗೆ ಕರಾಳ ವರ್ಷವಾಗಿ ಕಾಡಿದೆ. ಕೇವಲ ಹಣ ಸುರಿದರೆ ಸಾಲದು ಕಥೆಯಲ್ಲಿ ದಮ್ಮಿರಬೇಕು ಎಂದು ಪ್ರೇಕ್ಷಕರು ಮತ್ತೊಮ್ಮೆ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.








