ರಾಜ್ಯದಲ್ಲಿ ಒಂದೇ ದಿನ 20,288 RTPCR ಪರೀಕ್ಷೆ: ಕೋವಿಡ್ ಸೋಂಕಿತರ ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಗಣನೀಯ ಯಶಸ್ಸು:ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು – ಜುಲೈ 11, 2020: ವಾರಾಂತ್ಯದೊಳಗೆ 20 ಸಾವಿರ ಕೋವಿಡ್ ಪರೀಕ್ಷೆ ನಡೆಸುವ ಗುರಿ ಹೊಂದಿದ್ದ ರಾಜ್ಯದಲ್ಲಿ ಶನಿವಾರದಂದು 20,288 RTPCR ಪರೀಕ್ಷೆಗಳನ್ನು ನಡೆಸಲಾಗಿದ್ದು 2,798 ಪ್ರಕರಣಗಳು ಧೃಢಪಟ್ಟಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ನಗರದಲ್ಲಿಂದು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿನ ಪ್ರಮಾಣ ಇಂದಿಗೂ ಕೂಡ ರಾಜ್ಯದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದ್ದು 1.69% ರಷ್ಟಿದೆ. ಮರಣಪ್ರಮಾಣ ಕಡಿಮೆ ಮಾಡುವಲ್ಲಿ ಕರ್ನಾಟಕ ಉತ್ತಮ ಯಶಸ್ಸು ಸಾಧಿಸಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೋವಿಡ್ ನೋಡಲ್ ಅಧಿಕಾರಿ ಡಾ.ಶಶಿಭೂಷಣ್ ಉಪಸ್ಥಿತರಿದ್ದರು
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದು 1 ಲಕ್ಷ ಆಂಟಿಜೆನ್ ಟೆಸ್ಟ್ ಮಾಡಲಾಗಿದ್ದು, ನಾಳೆಯೇ ಇದರ ಫಲಿತಾಂಶ ಸಿಗಲಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು. ಲಾಕ್ಡೌನ್ ಕುರಿತಾದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರಿನಲ್ಲಿ ಲಾಕ್ಡೌನ್ ಮಾಡುವ ಕುರಿತಂತೆ 8 ವಲಯಗಳ ಉಸ್ತುವಾರಿ ಸಚಿವರು ಮಾನ್ಯ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಯವರು ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಿದರು.
3 C ಗಳಿಂದ ದೂರವಿರಿ, 3 W ಗಳನ್ನು ಪಾಲಿಸಿ
ಕೊರೋನ ಮಣಿಸಲು 3 C ಗಳಾದ (Closed Spaces, Close Contacts and Crowds) ಗಾಳಿಯಾಡದ ಪ್ರದೇಶ, ಹತ್ತಿರದ ಸಂಪರ್ಕ, ಗುಂಪುಗೂಡುವುದು ಇವುಗಳಿಂದ ದೂರವಿದ್ದು, 3 W (Watch your distance, Wear Masks, Wash your hands) ಗಳಾದ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಮತ್ತು ಆಗಾಗ
ಕೈತೊಳೆಯುತ್ತಿರುವುದು ಇವುಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಕೊರೋನ ಗೆಲ್ಲಬಹುದು ಎಂದು ಸಚಿವ ಸುಧಾಕರ್ ಅಭಿಪ್ರಾಯಪಟ್ಟರು.
ಕೊರೋನ ವಿರುದ್ಧದ ಹೋರಾಟದಲ್ಲಿ ಅಳಿಲು ಸೇವೆ
ಪ್ರತಿದಿನ ನೀತಿಯುಕ್ತ ಮಾಹಿತಿಗಳಿಂದ ಜನರಿಗೆ ಅರಿವು ಮೂಡಿಸಲು ಯತ್ನಿಸುತ್ತಿರುವ ಸಚಿವ ಸುಧಾಕರ್ ಅವರು ರಾಮಾಯಣದಲ್ಲಿ ರಾಮಸೇತುವೆ ನಿರ್ಮಿಸಲು ಅಳಿಲುಸೇವೆಯ ಮಹತ್ವವನ್ನು ವಿವರಿಸಿದರು. ಸೇವೆಯ ಮನಸ್ಥಿತಿ ಇರಬೇಕು, ಗಾತ್ರ ಮುಖ್ಯವಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಅದೇರೀತಿ ಕೊರೋನ ವಿರುದ್ಧದ ಸಮರದಲ್ಲಿ ನಮ್ಮ ಕೈಲಾಗುವ ನೆರವನ್ನು ಮಾಡಬೇಕು. ಚಿಕ್ಕ ಕೆಲಸ, ಅಲ್ಪ ಕಾಣಿಕೆ ಎಂಬ ಮನೋಭಾವ ಇರಬಾರದು. ಹಿಂಜರಿಕೆ ತೊರೆದು ನಮ್ಮ ಕೈಲಾದ ಸಹಾಯವನ್ನು ಮಾಡಲು ಮುಂದಾಗಬೇಕು ಎಂದು ಹೇಳಿದರು.
ಕೊರೋನ ನಿಯಂತ್ರಣಕ್ಕಾಗಿ ಸರ್ಕಾರ ಬೂತ್ ಮಟ್ಟದ ಸಮಿತಿಗಳನ್ನು ರಚಿಸಿ ಆದರಲ್ಲಿ ಧಾರ್ಮಿಕ, ಸಾಮಾಜಿಕ ಸಂಘ ಸಂಸ್ಥೆಗಳು, RSS, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಸ್ಕೌಟ್ಸ್ ಅಂಡ್ ಗೈಡ್ಸ್ ಮುಂತಾದ ಸಂಘಟನೆಗಳ ಸಹಕಾರ ಅಗತ್ಯವಿದೆ. ಕೋವಿಡ್ ಕೇರ್ ಸೆಂಟರ್ ಗಳಿಗೆ ಮತ್ತು ಆಸ್ಪತ್ರೆಗಳಿಗೆ ತಲುಪಿಸಲು ಸಹಾಯ ಮಾಡುವುದು, ಹಿರಿಯ ನಾಗರೀಕರು ಒಂಟಿಯಾಗಿದ್ದರೆ ಅವರಿಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಿವುದು
ಹೋಮ್ ಐಸೋಲೇಷನ್ ಕುರಿತು ಮನೆಯ ಸದಸ್ಯರಿಗೆ ಮತ್ತು ನೆರೆಹೊರೆಯವರಿಗೆ ಅರಿವು ಮೂಡಿಸುವುದು, ಮುಂಜಾಗ್ರತೆಗಳ ಬಗ್ಗೆ ತಿಳಿಸುವುದು, ಅವರಲ್ಲಿರುವ ಭಯ, ಆತಂಕ ಮತ್ತು ಸೋಂಕಿತರ ಮೇಲಿರುವ ಕಳಂಕ ಭಾವ ನಿವಾರಿಸುವುದು ಹೀಗೆ ಹಲವಾರು ರೀತಿಯಲ್ಲಿ ಸಮಾಜದ ನೆರವು ಸಹಕಾರ ಅಗತ್ಯವಿದೆ. ಆದ್ದರಿಂದ ನಿಮ್ಮೆಲ್ಲರ ಸಹಕಾರ ಕೋರುತ್ತೇನೆ ಎಂದು ಸಚಿವರು ಹೇಳಿದರು.