Assam : ಗರ್ಭಿಣಿ ಶಿಕ್ಷಕಿ ಮೇಲೆ ಹಲ್ಲೆ; 22 ವಿದ್ಯಾರ್ಥಿಗಳು ಅಮಾನತು…
ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದ್ದ ವಿದ್ಯಾರ್ಥಿಗಳ ಪೋಷಕರನ್ನ ಕರೆಸಿ ಚರ್ಚೆ ನಡೆಸಿದ್ದಕ್ಕೆ ಕೆರಳಿದ ವಿದ್ಯಾರ್ಥಿಗಳು ಗರ್ಭಿಣಿ ಶಿಕ್ಷಕಿ ಮೇಲೆ ಗುಂಪಾಗಿ ಹಲ್ಲೆಮಾಡಿರುವ ಘಟನೆ ಅಸ್ಸ್ಯಾಂ ರಾಜ್ಯ ದಿಬ್ರುಗಢದ ಜವಾಹರ್ ನವೋದಯ ವಿದ್ಯಾಲಯದಲ್ಲಿ ನಡೆದಿದೆ.
ಗರ್ಭಿಣಿಯಾಗಿರುವ ಇತಿಹಾಸ ಶಿಕ್ಷಕಿ ವಿದ್ಯಾರ್ಥಿಗಳ ವರ್ತನೆಯ ಬಗ್ಗೆ ಔಪಚಾರಿಕ ದೂರು ನೀಡಿದ ನಂತರ 22 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಆದರೆ, ಶಿಕ್ಷಕಿ ಪೊಲೀಸ್ ದೂರು ನೀಡಲು ನಿರಾಕರಿಸಿದ್ದಾರೆ.
ಕೆಲವು ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸಿದ್ದರಿಂದ ಚರ್ಚೆ ನಡೆಸಲು ಕರೆದಿದ್ದ ಪೋಷಕರ ಸಭೆಯ ನಂತರ ಈ ಘಟನೆ ಭಾನುವಾರ ನಡೆದಿದೆ.
ಶಾಲೆಯ ಕ್ಯಾಂಪಸ್ ನಿಂದ ಹೊರಬಂದ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುಂಪುಗೂಡಿ ಕೆಟ್ಟ ಭಾಷೆ ಬಳಸಿ ತಳ್ಳಾಡಿ ಬೆದರಿಕೆ ಹಾಕಿದ್ದಾರೆ. ನಂತರ ಶಾಲೆಯ ಇತರ ಸಿಬ್ಬಂದಿಗಳು, ಪ್ರಾಂಶುಪಾಲರು ಮತ್ತು ಕೆಲವು ವಿದ್ಯಾರ್ಥಿನಿಯರು ಶಿಕ್ಷಕಿಯ ರಕ್ಷಣೆಗೆ ಬಂದರು. ಗರ್ಭಿಣಿ ಶಿಕ್ಷಕಿಯನ್ನ ರಕ್ಷಿಸಲು ಪ್ರಯತ್ನಿಸಿದ ಪ್ರಾಂಶುಪಾಲರು ಮತ್ತು ಇತರ ಕೆಲವು ಶಿಕ್ಷಕರನ್ನು ಸಹ ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡರು ಎಂದು ಹೆಸರೇಳಲಿಚ್ಚಿಸಿದ ಸಿಬ್ಬಂದಿ ಹೇಳಿದ್ದಾರೆ.
ಅಧಿಕಾರಿಗಳು 22 ವಿದ್ಯಾರ್ಥಿಗಳನ್ನ ಅಮಾನತು ಮಾಡಿದ್ದು, ಅದರಲ್ಲಿ 9- 10 ತರಗತಿಯ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ.
22 students suspended in Assam for assault on pregnant school teacher