ಸಾಮಾಜಿಕ ಜಾಲತಾಣ ಹಾಗೂ ಮ್ಯಾಟ್ರಿಮೋನಿಯಲ್ ಸೈಟ್ ಬಳಸಿ ವ್ಯಕ್ತಿಯೊಬ್ಬ ಬರೋಬ್ಬರಿ 250ಕ್ಕೂ ಅಧಿಕ ಮಹಿಳೆಯರಿಗೆ ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ರೈಲ್ವೆ ಪೊಲೀಸರು ರಾಜಸ್ಥಾನ ಮೂಲದ ನರೇಶ್ ಪೂಜಾರಿ ಗೋಸ್ವಾಮಿ(45) ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ವ್ಯಕ್ತಿ ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಎನ್ನಲಾಗಿದ್ದು, ಮ್ಯಾಟ್ರಿಮೋನಿಯಲ್ ಸೈಟ್ ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರೊಫೈಲ್ ಗಳನ್ನು ಸೃಷ್ಟಿಸಿ ಮಹಿಳೆಯರು ಮತ್ತು ಅವರ ಪೋಷಕರಿಗೆ ಹಣ ನೀಡುವಂತೆ ಆಮಿಷವೊಡ್ಡುತ್ತಿದ್ದ. ಈತನ ವಿರುದ್ಧ ಕೊಯಮತ್ತೂರಿನ ಸಂತ್ರೆಸ್ತೆಯೊಬ್ಬರು ದೂರು ನೀಡಿದ ನಂತರ ತನಿಖೆ ಕೈಗೊಂಡ ಪೊಲೀಸರಿಗೆ, ಈತ ವಿಧವೆಯರನ್ನು ಮತ್ತು ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು, ತಡರಾತ್ರಿ ಮಹಿಳೆಯರೊಂದಿಗೆ ಸಂದೇಶ ಕಳುಹಿಸಿ, ಮಾತನಾಡಿ, ವಿಶ್ವಾಸ ಗಳಿಸಿ ಹಣ ನೀಡುವಂತೆ ಪೀಕುತ್ತಿದ್ದ ಎಂಬುವುದು ಗೊತ್ತಾಗಿದೆ.
ಈತ ಸುಂದರ ಯುವಕರ ಫೋಟೋ ಕಳುಹಿಸಿ ಆನ್ ಲೈನ್ ನಲ್ಲಿ ಪ್ರೊಫೈಲ್ ರಚಿಸಿ ಕಸ್ಟಮ್ ಅಧಿಕಾರಿ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ರೀತಿ ಫೋಸ್ ನೀಡಿ 259 ಮಹಿಳೆಯರಿಗೆ ವಂಚಿಸಿದ್ದಾನೆ ಎನ್ನಲಾಗಿದೆ. ಈತನ ವಂಚನೆಗೆ ಕರ್ನಾಟಕ ಅಷ್ಟೇ ಅಲ್ಲದೇ, ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಬಿಹಾರ, ಆಂಧ್ರ, ಜಾರ್ಖಂಡ್ ಸೇರಿದಂತೆ ಇನ್ನೂ ಹಲವು ರಾಜ್ಯಗಳ ಮಹಿಳೆಯರು ವಂಚನೆಗೊಳಗಾಗಿದ್ದಾರೆ. ಮಹಿಳೆಯರೊಂದಿಗೆ ಮಾತನಾಡಲು ಬೇರೆ ಬೇರೆ ನಕಲಿ ಹೆಸರಿನ ಸಿಮ್ ಕಾರ್ಡ್‌ಗಳನ್ನು ಬಳಸಿದ್ದಾನೆ ಎಂದು ಬೆಂಗಳೂರಿನ ರೈಲ್ವೆ ಡಿಐಜಿಪಿ ಡಾ ಎಸ್‌ಡಿ ಶರಣಪ್ಪ ಹೇಳಿದ್ದಾರೆ.
ಕೊಯಮತ್ತೂರು ಸಂತ್ರಸ್ತೆಯ ಪೋಷಕರು ಭೇಟಿಯಾಗಲು ಬೆಂಗಳೂರಿಗೆ ಬಂದ ವೇಳೆ ತನ್ನ ಸಂಬಂಧಿಕರಿಗೆ ಟಿಕೆಟ್ ಕಾಯ್ದಿರಿಸುವುದಾಗಿ ಹೇಳಿ ರೈಲ್ವೇ ನಿಲ್ದಾಣದಲ್ಲಿ ಅವರಿಂದ 10 ಸಾವಿರ ರೂಪಾಯಿ ಪಡೆದು ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಪ್ರಕರಣ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು. ಸದ್ಯ ಈ ಪ್ರಕರಣದ ಜಾಡು ಹಿಡಿದು ಹೋದ ಪೊಲೀಸರಿಗೆ ಈತನ ಮುಖವಾಡ ಬಯಲಿಗೆ ಬಂದಿದೆ.