ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ | ಆಲ್ ದಿ ಬೆಸ್ಟ್ ವಿದ್ಯಾರ್ಥಿಗಳೆ
ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಹೊಸ ಹುಮ್ಮಸಿನಿಂದ ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ.
ಪರೀಕ್ಷೆ ಪ್ರಾರಂಭಕ್ಕೆ ಇನ್ನೇನು ಕೆಲವೇ ಗಂಟೆ ಬಾಕಿ ಇದ್ದು, ಕಾಲೇಜುಗಳ ಸಿಬ್ಬಂದಿ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಈ ನಡುವೆ ಶಿಕ್ಷಣ ಇಲಾಖೆಗೂ ಟೆನ್ಷನ್ ಶುರುವಾಗಿದೆ. ಈ ಬಾರಿಯ ದ್ವತೀಯ ಪಿಯುಸಿ ಪರೀಕ್ಷೆ ಸವಾಲಾಗಿ ಪರಿಣಮಿಸಿದ್ದು, ಹಿಜಾಬ್ ಕರಿನೆರಳು ಪರೀಕ್ಷೆ ಮೇಲೆ ಬೀಳದಿರಲಿ ಎಂದು ಶಿಕ್ಷಣ ಇಲಾಖೆ ಆಶಿಸುತ್ತಿದೆ.
ಹಿಜಾಬ್ ಗೊಂದಲದ ನಡುವೆಯೇ SSLC 2022ರ ಪರೀಕ್ಷೆಗಳು ಸುಭೀಕ್ಷವಾಗಿ ಮುಗಿದಿದ್ದು, ಈಗ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಸುಭೀಕ್ಷವಾಗಿ ಮುಗಿಸಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆಯಲ್ಲಿದೆ. ಇನ್ನೂ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಕ್ಕಳ ಭವಿಷ್ಯಕ್ಕೆ ತುಂಬಾ ಮುಖ್ಯವಾಗಿದ್ದು, ಮಕ್ಕಳಿಗೆ ಜನರು, ಕಾಲೇಜುಗಳು, ಶಿಕ್ಷಣ ಇಲಾಖೆ ಮತ್ತು ಪೋಷಕರು ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ.
ಇಂದಿನಿಂದ ಪ್ರಾರಂಭವಾಗು ಪರೀಕ್ಷೆಗಳು ಮೇ 18ರವರಗೆ ನಡೆಯಲಿವೆ. ಪರೀಕ್ಷೆಗೆ SSLC ರೀತಿಯಲ್ಲಿ ಪಿಯು ಪರೀಕ್ಷೆಗೂ ಸಮವಸ್ತ್ರ ನಿಯಮ ಜಾರಿಯಲ್ಲಿರಲಿದೆ. ಹಿಜಾಬ್ದ ಧರಿಸಿ ಪರೀಕ್ಷೆಗೆ ಬಂದರೇ ಅವಕಾಶವಿಲ್ಲ. ಹೀಗಾಗಿ ಪರೀಕ್ಷಾರ್ಥಿಗಳಿಗೆ ಸಮವಸ್ತ್ರ ಪಾಲನೆ ಕಡ್ಡಾಯವಾಗಿದೆ.
ಈಗಾಗಲೇ ಆಯಾ ಕಾಲೇಜುಗಳ, ಕಾಲೇಜು ಅಭಿವೃದ್ಧಿ ಕಮಿಟಿಗಳಿಗೆ ಸೂಚನೆ ನೀಡಿದ್ದು, ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಆರ್. ರಾಮಚಂದ್ರನ್ ಹೇಳಿದ್ದಾರೆ.