ವಲಸೆ ಕಾರ್ಮಿಕರ ಮೇಲೆ ಹರಿದ ಟ್ರಕ್, 3 ಸಾವು 11 ಮಂದಿಗೆ ಗಾಯ
ರಸ್ತೆ ದುರಸ್ತಿ ಕೆಲಸ ಮುಗಿಸಿ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಸರಕು ಸಾಗಣೆ ಲಾರಿಯೊಂದು ಹರಿದು ಮೂವರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ಜಜ್ಜರ್ ಬಳಿ ನಡೆದಿದೆ.
ಇಲ್ಲಿನ ಕುಂಡ್ಲಿ ಮನೇಸರ್ ಪಲ್ವಾಲ್ (ಕೆಎಂಪಿ) ಎಕ್ಸ್ಪ್ರೆಸ್- ವೇ ಹೆದ್ದಾರಿಯಲ್ಲಿ ರಸ್ತೆ ಅಪಘಾತ ಘಟಿಸಿದೆ. ವಲಸೆ ಕಾರ್ಮಿಕರು ರಸ್ತೆದುರಸ್ತಿ ಕೆಲಸ ಮುಗಿಸಿ, ರಸ್ತೆ ಬದಿಯಲ್ಲೇ ಮಲಗಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ಲಾರಿಯೊಂದು ಕಾರ್ಮಿಕರ ಮೇಲೆ ಹರಿದಿದೆ.
ಘಟನೆ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ 11 ಮಂದಿ ಪೈಕಿ 10 ಮಂದಿಯನ್ನು PGIMS ಆಸ್ಪತ್ರೆಗೆ, ಗಂಭೀರ ಗಾಯಗೊಂಡ ಓರ್ವನನ್ನು ಬಹದ್ದೂರ್ಗಢ್ನ ಟ್ರಾಮಾ ಸೆಂಟರ್ಗೆ ದಾಖಲಿಸಲಾಗಿದೆ.
ಸದ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬಹದ್ದೂರ್ಗಢ ಜನರಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.