Chhattisgarh : ನಕ್ಸಲರೊಂದಿಗೆ ನಡೆದ ಎನ್ಕೌಂಟರ್ ಕಾಳಗದಲ್ಲಿ 3 ಯೋಧರು ಹುತಾತ್ಮ….
ಛತ್ತೀಸ್ ಘಡದಲ್ಲಿ ಮತ್ತೆ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಸುಕ್ಮ ಜಿಲ್ಲೆಯಲ್ಲಿ ನಡೆದ ಸೈನಿಕರು ಮತ್ತು ನಕ್ಸಲರ ನಡುವಿನ ಕಾಳಗದಲ್ಲಿ ನಡೆದ ಭೀಕರ ಎನ್ಕೌಂಟರ್ ನಲ್ಲಿ 3 ಸೈನಿಕರು ಹುತಾತ್ಮರಾಗಿದ್ದಾರೆ.
ಶನಿವಾರ ಬೆಳಗ್ಗೆ ಜಾಗರಗುಂದ ಸಮೀಪದ ಆಶ್ರಮ ಪಾರಾದಲ್ಲಿ DRG(District Reserve Guards) ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಗೆ ತೆರಳಿದ್ದ ಸಮಯದಲ್ಲಿ ಯೊಧರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಬಾಂಬ್ ಸ್ಫೋಟದ ಸದ್ದು ಕೂಡ ಕೇಳಿಸಿತು.
ಈ ವೇಳೆ ಎಎಸ್ಐ ರಾಮುರಾಮ್ ನಾಗ್, ಸಹಾಯಕ ಕಾನ್ಸ್ಟೆಬಲ್ ಕುಂಜಮ್ ಜೋಗ ಮತ್ತು ಕಾನ್ಸ್ಟೆಬಲ್ ವನಜಂ ಭೀಮಾ ಅವರು ಹುತಾತ್ಮರಾಗಿದ್ದಾರೆ. ಅಂತೆಯೇ ದಾಳಿಯಲ್ಲಿ ಇಬ್ಬರು ಯೋಧರೂ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಸೇನಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಹೊಂಚು ಹಾಕಿ ಹೊಡೆದ ನಕ್ಸಲರು
ಹೊಸದಾಗಿ ಸ್ಥಾಪಿಸಲಾದ ಜಾಗರಗುಂದ ಪ್ರದೇಶದ ಕುಂದರ್ ಶಿಬಿರದಿಂದ ಯೋಧರು ಶೋಧ ಕಾರ್ಯಾಚರಣೆಗೆ ತೆರಳಿದ್ದರು. ನಂತರ ಶಿಬಿರದಿಂದ ಎರಡು ಕಿ.ಮೀ ದೂರದ ಆಶ್ರಂಪಾರ ಬಳಿ ಬೆಳಗ್ಗೆ ಎಂಟು ಗಂಟೆಗೆ ನಕ್ಸಲೀಯರು ಹೊಂಚು ಹಾಕಿ ಸೈನಿಕರ ಮೇಲೆ ದಾಳಿ ನಡೆಸಿದ್ದಾರೆ. ಬೆಳಗ್ಗೆ 9.30ರ ಸುಮಾರಿಗೆ ಎನ್ಕೌಂಟರ್ ನಿಲ್ಲಿಸಲಾಯಿತು ಎಂದು ಸುಕ್ಮಾ ಎಸ್ಪಿ ಸುನಿಲ್ ಶರ್ಮಾ ತಿಳಿಸಿದ್ದಾರೆ. ಬೆಂಗಾವಲು ಸೇನಾಪಡೆಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಪ್ರದೇಶದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
3 security personnel killed in encounter with Naxals in Chhattisgarh’s Sukma