ಬಾಲಕನ ರಕ್ಷಣೆಗೆ ಹೋದ 30 ಜನ ಬಾವಿಗೆ ಬಿದ್ದ ಪ್ರಕರಣ – ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಮಧ್ಯಪ್ರದೇಶ : 14 ವರ್ಷದ ಹುಡುಗನೊಬ್ಬ ಬಾವಿಗೆ ಬಿದ್ದಿದ್ದ ವೇಳೆ ಆತನ ರಕ್ಷಣೆಗಾಗಿ ಅಲ್ಲಿಗೆ ಹೋಗಿದ್ದ 30 ಮಂದಿ ಅದೇ ಬಾವಿಗೆ ಬಿದ್ದಿದ್ದರು.. ಈ ದುರ್ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಲಾಲ್ ಪತರ್ ಎಂಬ ಹಳ್ಳಿಯಲ್ಲಿ ಸಂಭವಿಸಿತ್ತು. ಈ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಈಗ 11ಕ್ಕೆ ಏರಿಕೆಯಾಗಿದೆ. 19 ಮಂದಿಯನ್ನು ರಾಜ್ಯ ವಿಪತ್ತು ನಿರ್ವಹಣಾ ದಳ ರಕ್ಷಿಸಿದೆ.
ಇನ್ನೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಮೃತರ ಕುಟುಂಬವರ್ಗಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ಬಾವಿಗೆ ಬಿದ್ದು ಮೃತಪಟ್ಟ ಕುಟುಂಬ ಸದಸ್ಯರಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಬಾವಿಗೆ ಬಿದ್ದ ಬಾಲಕನ ರಕ್ಷಣಾ ಕಾರ್ಯಾಚರಣೆ ವೀಕ್ಷಿಸಲು ಅಲ್ಲಿಗೆ ಜನರ ಗುಂಪು ಮುಗಿಬಿದ್ದಿತ್ತು. ಈ ವೇಳೆ ಬಾವಿಕಟ್ಟೆ ಕುಸಿದು ಬಿದ್ದಿತ್ತು. ಪರಿಣಾಮ 50 ಅಡಿ ಆಳದ ಬಾವಿಗೆ ಒಟ್ಟು 30 ಮಂದಿ ಬಿದ್ದಿದ್ದರು. ಈ ಘಟನೆಯಲ್ಲಿ ಮೃತಪಟ್ಟ 11 ಮಂದಿ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಲಾಲ್ ಪತಾರ್‌ನಲ್ಲಿ ಬಾವಿಗೆ ಬಿದ್ದವರ ಪೈಕಿ 19 ಮಂದಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಗಿದೆ.