ಪಿಎಂ ಕೇರ್ ನಲ್ಲಿ 35 ಸಾವಿರ ಕೋಟಿ ಇದೆ. ಆದ್ರೆ ಅದರಲ್ಲಿ ನಯಾಪೈಸೆ ರಾಜ್ಯಕ್ಕೆ ಬಂದಿಲ್ಲ. ರಾಜ್ಯದಿಂದ ಹೋಗಿರುವ ಹಣವನ್ನಾದರೂ ನಮಗೆ ಕೇಂದ್ರ ಕೊಡಬೇಕಿತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಿವಿಧ ವರ್ಗಗಳ ಅನೇಕ ಜನರು ಭೇಟಿಯಾಗಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಅದನ್ನು ಸರ್ಕಾರದ ಗಮನಕ್ಕೆ ತರುವುದು ವಿರೋಧ ಪಕ್ಷದ ನಾಯಕನಾಗಿ ನನ್ನ ಕರ್ತವ್ಯ. ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಣೆಗೆ ಮುನ್ನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ರೆ, ಕೊರೊನಾ ಸೋಂಕು ರಾಜ್ಯದಲ್ಲಿ ಉಲ್ಬಣ ಆಗುತ್ತಿರಲಿಲ್ಲ ಎಂದು ಅಭಿಪ್ರಾಯಟ್ಟರು.
ಪಿಎಂ ಕೇರ್ ನಲ್ಲಿ 35 ಸಾವಿರ ಕೋಟಿ ಇದೆ. ಅದರಲ್ಲಿ ನಯಾಪೈಸೆ ರಾಜ್ಯಕ್ಕೆ ಬಂದಿಲ್ಲ. ರಾಜ್ಯದಿಂದ ಹೋಗಿರುವ ಹಣವನ್ನಾದರೂ ನಮಗೆ ಕೇಂದ್ರ ಸರ್ಕಾರ ಕೊಡಬೇಕಿತ್ತು. ಜನರ ಬಳಿ ಹಣವಿಲ್ಲ ಎಂದರೆ ಖರೀದಿ ಮಾಡುವ ಶಕ್ತಿ ಇರುವುದಿಲ್ಲ. ಖರೀದಿ ಇಲ್ಲ ಎಂದಾದರೆ ಮಾರುಕಟ್ಟೆಯಲ್ಲಿ ಯಾವುದಕ್ಕೂ ಬೇಡಿಕೆ ಇರೋದಿಲ್ಲ. ಖರೀದಿ ಶಕ್ತಿ ಜನರಿಗೆ ಬಂದರೆ ಆರ್ಥಿಕ ಚಟುವಟಿಕೆಗಳು ಬೆಳೆಯುತ್ತವೆ ಎಂದು ತಜ್ಞರು ಹೇಳಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವನ್ನು ನೆರವಿಗೆ ಒತ್ತಾಯಿಸಿ ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ಇದೇ ವೇಳೆ ವಿಶೇಷ ಪ್ಯಾಕೇಜ್ ಬಗ್ಗೆ ಮಾತನಾಡಿದ ಅವರು, ಸಿಎಂ ಘೋಷಣೆ ಮಾಡಿರುವ ಪ್ಯಾಕೇಜ್ ಸ್ವಾಗತಾರ್ಹ. ಆದರೆ, ಹಲವಾರು ಮಂದಿಯನ್ನು ಪ್ಯಾಕೇಜ್ ನಿಂದ ಹೊರಗೆ ಇಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.








