ರಾಯಚೂರು: ಗುರು ರಾಘವೇಂದ್ರ ಸ್ವಾಮಿಗಳ (Guru Raghavendra) ಸನ್ನಿಧಿಯಲ್ಲಿ ಇಂದು ರಾಯರ 353ನೇ ಆರಾಧನಾ ಮಹೋತ್ಸವದ ಸಂಭ್ರಮ ಮನೆ ಮಾಡಿದೆ.
ಭಾನುವಾರದಿಂದ ಏಳು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ವೈಭವವೇ ಮಂತ್ರಾಲಯ(Mantralaya)ದಲ್ಲಿ ಗೋಚರಿಸಲಿದೆ. ಶಿಲಾಮಂಟಪಕ್ಕೆ ಭಕ್ತರು ನಿರ್ಮಿಸುತ್ತಿರುವ ಸ್ವರ್ಣಲೇಪಿತ ಕವಚ ಈ ಬಾರಿಯ ಆಕರ್ಷಣೆಯಾಗಿದೆ. ಹೀಗಾಗಿ ಮಂತ್ರಾಲಯದಲ್ಲಿ ಧಾರ್ಮಿಕ ಕಾರ್ಯಗಳು ಝೆಂಕರಿಸುತ್ತಿವೆ.
ಕಲಿಯುಗದ ಕಾಮಧೇನು, ಮಂತ್ರಾಕ್ಷತೆ ಮಹಿಮೆಯ ಮಹಾಪುರುಷ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.
ಇಂದು ಸಂಜೆ ಧ್ವಜಾರೋಹಣ ಮೂಲಕ ರಾಯರ ಆರಾಧನಾ ಮಹೋತ್ಸವಕ್ಕೆ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಚಾಲನೆ ನೀಡಲಿದ್ದಾರೆ. ರಾಯರು ಸಶರೀರವಾಗಿ ವೃಂದಾವನಸ್ಥರಾಗಿ 353 ವರ್ಷಗಳು ಪೂರ್ಣಗೊಳ್ಳುತ್ತಿರುವ ಸಂದರ್ಭವನ್ನು ರಾಯರ ಆರಾಧನಾ ಮಹೋತ್ಸವವಾಗಿ ಆ.18 ರಿಂದ 24 ರವರೆಗೆ ಏಳು ದಿನಗಳ ಕಾಲ ಆಚರಿಸಲಾಗುತ್ತದೆ.
ಬೆಳಗಿನ ಜಾವದಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ರಾಯರ ಮಠ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ. ಆ.20 ಕ್ಕೆ ಪೂರ್ವಾರಾಧನೆ, 21 ಕ್ಕೆ ಮಧ್ಯಾರಾಧನೆ, 22 ಕ್ಕೆ ಉತ್ತರಾರಾಧನೆ ನಡೆಯಲಿದ್ದು, ರಥೋತ್ಸವಗಳು, ಮಹಾಪಂಚಾಮೃತ ಅಭಿಷೇಕ, ಮೂಲ ರಾಮದೇವರ ಉತ್ಸವ ಸೇರಿ ಹಲವು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಆ.20 ರಂದು ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಬಹುಕೋಟಿ ಮೌಲ್ಯದ ಸುವರ್ಣ ಶಿಲಾಮಂಟಪ ಮೆಗಾ ಪ್ರಾಜೆಕ್ಟ್ ಈ ಬಾರಿಯ ಆರಾಧನಾ ಮಹೋತ್ಸವದ ವಿಶೇಷ ಆಕರ್ಷಣೆಯಾಗಿದೆ. ಭಕ್ತರ ದೇಣಿಗೆಯಿಂದ ರಾಯರ ವೃಂದಾವನದ ಶಿಲಾಮಂಟಪಕ್ಕೆ ಚಿನ್ನದ ಕವಚ ತೊಡಿಸುವ ಕಾರ್ಯವಾಗಲಿದೆ. ತುಂಗಭದ್ರಾ ನದಿಯಲ್ಲಿ ನೀರು ಇರುವುದರಿಂದಾಗಿ ಪುಣ್ಯ ಸ್ನಾನಕ್ಕೆ ಭಕ್ತರಿಗೆ ಅನುವುಮಾಡಿಕೊಡಲಾಗುತ್ತಿದೆ. ಸ್ನಾನ ಘಟ್ಟದಲ್ಲಿ ಶವರ್ ವ್ಯವಸ್ಥೆ ಸೇರಿ ಭಕ್ತರಿಗೆ ಅಗತ್ಯ ಸೌಲಭ್ಯ ಒದಗಿಸಲು ಮಠದ ಆಡಳಿತ ಮಂಡಳಿ ಮುಂದಾಗಿದೆ.








