ನವದೆಹಲಿ : ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 2,293 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, 71 ಸಾವು ಸಂಭವಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಒಂದೇ ದಿನ ಇಷ್ಟು ಹೆಚ್ಚು ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗಿರುವುದು ಇದೇ ಮೊದಲಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 37,336ಕ್ಕೆ ಏರಿಕೆಯಾಗಿದೆ. ಈ ಪೈಕಿ 1,218 ಜನ ಮೃತಪಟ್ಟಿದ್ದು, 26,167 ಮಂದಿ ವಿವಿಧ ರಾಜ್ಯಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9,950 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲಿ ಈವರೆಗೆ ಅತಿಹೆಚ್ಚು ಪ್ರಕರಣಗಳು ದಾಖಲಾಗಿದ್ದು, 11,506 ಪ್ರಕರಣಗಳ ಪೈಕಿ 485 ಮಂದಿ ಮೃತಪಟ್ಟಿದ್ದಾರೆ. ಗುಜರಾತಿನಲ್ಲಿ 4,721 ಪ್ರಕರಣಗಳ ಪೈಕಿ 236 ಜನ ಸಾವಿಗೀಡಾಗಿದ್ದಾರೆ.
ಮಧ್ಯಪ್ರದೇಶದಲ್ಲಿ 145, ದೆಹಲಿಯಲ್ಲಿ 61, ರಾಜಸ್ಥಾನದಲ್ಲಿ 62, ಉತ್ತರ ಪ್ರದೇಶದಲ್ಲಿ 42 ಮತ್ತು ಆಂಧ್ರ ಪ್ರದೇಶದಲ್ಲಿ 33 ಮಂದಿ ಕೊರೊನಾ ಸೋಂಕಿನಿಂದ ಈವರೆಗೆ ಮೃತಪಟ್ಟಿದ್ದಾರೆ.