ಹೈದರಾಬಾದ್ : ತೆಲಂಗಾಣದ ವನಪರ್ತಿ ಜಿಲ್ಲೆಯ ಗ್ರಾಮದ ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಅಜ್ಮೀರಾ ಬೀ, ಆಸ್ಮಾ ಬೇಗಂ, ಖವಾಜಾ ಪಾಷಾ ಮತ್ತು ಹಸೀನಾ ಎಂದು ಗುರುತಿಸಲಾಗಿದೆ. ಈ ನಾಲ್ವರ ಮೃದೇಹಗಳು ಮನೆಯ ವಿವಿಧ ಭಾಗಗಳಲ್ಲಿ ಪತ್ತೆಯಾಗಿವೆ. ಮೂವರ ಶವ ಮನೆಯೊಳಗೆ ಮೂರು ವಿಭಿನ್ನ ಸ್ಥಳಗಳಲ್ಲಿ ಪತ್ತೆಯಾಗಿದ್ದು, ಇನ್ನೊಂದು ಶವ ಮನೆಯ ಹಿಂಭಾಗದಲ್ಲಿ ಪತ್ತೆಯಾಗಿದೆ. ಮೃತ ದೇಹದ ಪಕ್ಕದಲ್ಲಿ ನಿಂಬೆ ಹಣ್ಣಿನ ಪ್ಯಾಕೆಟ್ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಿಂದ ಯಾರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತದೇಹಗಳನ್ನು ನೋಡಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.









