ಬೆಂಗಳೂರು: ಕೇವಲ 5 ರೂಪಾಯಿ ಚಿಲ್ಲರೆಗಾಗಿ ಬಿಎಂಟಿಸಿ ಬಸ್ ಕಂಡಕ್ಟರ್ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಬಿಎಂಟಿಸಿ (BMTC) ಕಂಡಕ್ಟರ್ ನನ್ನು ಅಮಾನತು ಮಾಡಲಾಗಿದೆ.
ಈ ಘಟನೆ ಆ. 6 ರಂದು ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಆದರೆ, ತಡವಾಗಿ ಬೆಳಕಿಗೆ ಬಂದಿದೆ. ಪ್ರಯಾಣಿಕ ಅಭಿನವ್ ರಾಜ್ ಹಲ್ಲೆಗೊಳಗಾದ ವ್ಯಕ್ತಿ. ಅಭಿನವ್ ಮೇಲೆ ಕೇವಲ 5 ರೂ. ಚಿಲ್ಲರೆಗಾಗಿ ಬಸ್ ಕಂಡಕ್ಟರ್ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಯಾಣಿಕ ಕೆ.ಆರ್. ಪುರಂ ರೈಲ್ವೆ ನಿಲ್ದಾಣದಿಂದ ಮಾರತ್ತಹಳ್ಳಿ ಕಲಾಮಂದಿರಕ್ಕೆ ಟಿಕೆಟ್ ತೆಗೆದುಕೊಂಡಿದ್ದ. ಟಿಕೆಟ್ ದರ 15 ರೂ. ಇತ್ತು. ಆತ 20 ರೂ. ಕೊಟ್ಟಿದ್ದ. ಬಾಕಿ 5 ರೂ. ಮರಳಿ ಕೇಳಿದ್ದಕ್ಕೆ ಕಂಡಕ್ಟರ್ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಯಾಣಿಕನಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಕಂಡಕ್ಟರ್‌ನನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ಈ ಕುರಿತು ಬಿಎಂಟಿಸಿ ಸ್ಪಷ್ಟನೆ ನೀಡಿದ್ದು, ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸುವುದು ಸುರಕ್ಷಿತ ಎನ್ನುವ ಭಾವನೆ ಉಂಟಾಗಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಯಾಣಿಕರ ಮೇಲೆ ಯಾವುದೇ ತರಹದ ದೌರ್ಜನ್ಯ, ಅಸಭ್ಯ ವರ್ತನೆ, ಅಹಿತಕರ ಘಟನೆಗಳು ಕಂಡುಬಂದಲ್ಲಿ ತಪ್ಪಿತಸ್ಥರ ಮೇಲೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.