5 ಸುಲಭ , ರುಚಿಕರ , ಆರೋಗ್ಯಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!
ನುಗ್ಗೆ ಸೊಪ್ಪಿನ ಪಲ್ಯ
ಬೇಕಾಗುವ ಸಾಮಗ್ರಿಗಳು
ನುಗ್ಗೆಸೊಪ್ಪು – 1 ದೊಡ್ಡ ಕಟ್ಟು
ಶೇಂಗ ಬೀಜ – 1/2 ಕಪ್
ಮೆಣಸಿನ ಪುಡಿ – 1 ಚಮಚ
ಸಾಸಿವೆ – 1/2 ಚಮಚ
ಬೆಳ್ಳುಳ್ಳಿ – 2
ಕರಿಬೇವು – ಸ್ವಲ್ಪ
ಒಣ ಮೆಣಸು – 2
ಕಡಲೆ ಬೇಳೆ – 4 ಚಮಚ
ಉದ್ದಿನ ಬೇಳೆ – 2 ಚಮಚ
ಈರುಳ್ಳಿ – 1
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲು ನುಗ್ಗೆ ಸೊಪ್ಪನ್ನು ತೊಳೆದು ಸಣ್ಣಗೆ ಕತ್ತರಿಸಿ ಸ್ವಲ್ಪ ನೀರು ಉಪ್ಪು ಸೇರಿಸಿ ಬೇಯಿಸಿ. ನಂತರ ಮಿಕ್ಸಿ ಜಾರಿನಲ್ಲಿ ಹುರಿದ ಶೇಂಗಾ ಬೀಜ, ಮೆಣಸಿನ ಪುಡಿ, ಬೆಳ್ಳುಳ್ಳಿ ಸೇರಿಸಿ ರುಬ್ಬಿ.
ಬಳಿಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಸೇರಿಸಿ. ಅದು ಸಿಡಿದ ಬಳಿಕ ಕರಿಬೇವು ಒಣಮೆಣಸು, ಕಡಲೆ ಬೇಳೆ, ಉದ್ದಿನ ಬೇಳೆ ಸೇರಿಸಿ ಹುರಿಯಿರಿ. ನಂತರ ಇದಕ್ಕೆ ಉದ್ದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಬಾಡಿಸಿಕೊಳ್ಳಿ. ಈಗ ಬೇಯಿಸಿದ ಸೊಪ್ಪು, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ರುಬ್ಬಿಟ್ಟುಕೊಂಡ ಶೇಂಗಾ ಮಿಶ್ರಣವನ್ನು ಸೇರಿಸಿ ಬೆರೆಸಿ. ಈಗ ರುಚಿಯಾದ ನುಗ್ಗೆಸೊಪ್ಪಿನ ಪಲ್ಯ ಸವಿಯಲು ಸಿದ್ಧ.
ಹಸಿರು ವೆಜ್ ಪುಲಾವ್
ಬೇಕಾಗುವ ಸಾಮಾಗ್ರಿಗಳು
ಬಾಸ್ಮತಿ ಅಕ್ಕಿ – 2 ಕಪ್
ಕ್ಯಾರೆಟ್ – 3
ಬೀನ್ಸ್ 8
ಬಟಾಟೆ – 2
ಬಟಾಣಿ ನೆನೆಸಿದ್ದು – 1/2 ಕಪ್
ಸೋಯಾ ಬಾಲ್ – ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಜೀರಿಗೆ – 1/2 ಚಮಚ
ಕರಿಬೇವು – ಸ್ವಲ್ಪ
ಮೆಂತೆ ಪೌಡರ್ – 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಸಾಲೆಗೆ
ಕೊತ್ತಂಬರಿ ಸೊಪ್ಪು – 1/2 ಕಟ್
ಪುದಿನ ಸೊಪ್ಪು – 1/4 ಕಟ್
ಹಸಿಮೆಣಸಿನ ಕಾಯಿ – 15
ಈರುಳ್ಳಿ – 2
ಟೊಮೆಟೊ – 1
ತೆಂಗಿನಕಾಯಿ ತುರಿ – 1/2 ಕಪ್
ಚಕ್ಕೆ – 2 ತುಂಡು
ಲವಂಗ – 2
ಏಲಕ್ಕಿ – 2
ಪಲಾವ್ ಎಲೆ – 1
ಮೊಗ್ಗು – 1
ಮಾಡುವ ವಿಧಾನ
ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು, ಹಸಿಮೆಣಸಿನಕಾಯಿ, ಈರುಳ್ಳಿ, ಟೊಮೆಟೊ, ತೆಂಗಿನ ಕಾಯಿ ತುರಿ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಮೊಗ್ಗುಗಳನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿ.
ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ನೆನೆಸಿಡಿ. ಕ್ಯಾರೆಟ್, ಬೀನ್ಸ್, ಬಟಾಟೆಗಳನ್ನು ಚಿಕ್ಕದಾಗಿ ಕತ್ತರಿಸಿ ಇಟ್ಟುಕೊಳ್ಳಿ. ನಂತರ ಕುಕ್ಕರ್ ಗೆ 2 ಚಮಚ ಎಣ್ಣೆ ಸೇರಿಸಿ ಬಿಸಿ ಮಾಡಿ. ಅದಕ್ಕೆ ಜೀರಿಗೆ, ಕರಿಬೇವು, ಮೆಂತೆ ಪೌಡರ್ ಸೇರಿಸಿ. ಪರಿಮಳ ಬಂದ ಮೇಲೆ ಕತ್ತರಿಸಿದ ತರಕಾರಿ ಸೇರಿಸಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಇದಕ್ಕೆ ರುಬ್ಬಿದ ಮಸಾಲೆ ಸೇರಿಸಿ 5 ನಿಮಿಷ ಚೆನ್ನಾಗಿ ಬೆರೆಸಿ. ಈಗ ಅಕ್ಕಿಯನ್ನು ಹಾಕಿ, ಅಗತ್ಯವಿರುವಷ್ಟು ನೀರನ್ನು ಸೇರಿಸಿ. ಉಪ್ಪನ್ನು ಬೆರೆಸಿ. ಕುಕ್ಕರ್ ಮುಚ್ಚಳ ಮುಚ್ಚಿ 2 ವಿಸಲ್ ಕೂಗಿಸಿ. ರುಚಿಯಾದ ಬಿಸಿ ಬಿಸಿಯಾದ ಹಸಿರು ವೆಜ್ ಪಲಾವ್ ಸವಿಯಲು ಸಿದ್ಧವಾಗಿದೆ.
ಮೆಂತೆ ಸೊಪ್ಪಿನ ದೋಸೆ
ಬೇಕಾಗುವ ಸಾಮಗ್ರಿಗಳು
ದೋಸೆ ಅಕ್ಕಿ – 2 ಕಪ್
ಉದ್ದಿನಬೇಳೆ – 1/2 ಕಪ್
ಮೆಂತೆ – 1 ಚಮಚ
ಮೆಂತೆ ಸೊಪ್ಪು – 1 ಕಟ್ಟು
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲಿಗೆ ದೋಸೆ ಅಕ್ಕಿ, ಮೆಂತೆಯನ್ನು ತೊಳೆದು 4 ಗಂಟೆಗಳ ಕಾಲ ನೀರಲ್ಲಿ ನೆನೆಸಿಡಿ. ಉದ್ದಿನಬೇಳೆಯನ್ನು ಸಾಕಷ್ಟು ನೀರಿನಲ್ಲಿ 2 ಗಂಟೆಗಳ ಕಾಲ ನೆನೆಸಿಡಿ. ನೀರನ್ನು ಸೋಸಿ ದೋಸೆ ಅಕ್ಕಿ ಮತ್ತು ಮೆಂತೆ ಹಾಗೂ ಉದ್ದಿನಬೇಳೆಯನ್ನು ಚೆನ್ನಾಗಿ ರುಬ್ಬಿ. ರಾತ್ರಿಯಿಡೀ ಹುದುಗಲು ಬಿಡಿ. ಮರುದಿನ ಬೆಳಗ್ಗೆ ಹಿಟ್ಟಿಗೆ ಉಪ್ಪು ಸೇರಿಸಿ ಕಲಸಿ. ಮೆಂತೆ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸೇರಿಸಿ.
ದೋಸೆ ತವಾಗೆ ಎಣ್ಣೆ ಸವರಿ ದೋಸೆ ಹಿಟ್ಟನ್ನು ಹೊಯ್ದು ವೃತ್ತಾಕಾರವಾಗಿ ಹರಡಿ. ಬಿಸಿಯಾದ ಗರಿಗರಿ ದೋಸೆಯನ್ನು ಚಟ್ನಿ ಜೊತೆಗೆ ಸವಿಯಿರಿ.
ಧಿಡೀರ್ ಟೊಮೆಟೊ ದೋಸೆ
ಬೇಕಾಗುವ ಸಾಮಾಗ್ರಿಗಳು
ಟೊಮೆಟೊ – 2
ಒಣಮೆಣಸು – 2
ಶುಂಠಿ – 1/2 ಇಂಚು
ರವೆ – 1/2 ಕಪ್
ಅಕ್ಕಿ ಹಿಟ್ಟು – 1/4 ಕಪ್
ನೀರು – ಅಗತ್ಯವಿರುವಷ್ಟು
ಈರುಳ್ಳಿ – 1
ಜೀರಿಗೆ – 1 ಚಮಚ
ಗೋಧಿ ಹಿಟ್ಟು – 2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ ಸ್ವಲ್ಪ.
ಮಾಡುವ ವಿಧಾನ
ಮೊದಲಿಗೆ ಟೊಮೆಟೊ, ಶುಂಠಿಗಳನ್ನು ಚಿಕ್ಕದಾಗಿ ಕತ್ತರಿಸಿ. ಮಿಕ್ಸಿ ಜಾರಿಗೆ ಹಾಕಿ, ಒಣಮೆಣಸು ಸೇರಿಸಿ ಚೆನ್ನಾಗಿ ರುಬ್ಬಿ.
ಈಗ ಒಂದು ಅಗಲವಾದ ಪಾತ್ರೆ ತೆಗೆದುಕೊಂಡು ಅದಕ್ಕೆ ರವೆ, ಗೋಧಿ ಹಿಟ್ಟು ಸೇರಿಸಿ, 1 ಕಪ್ ನೀರು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ರುಬ್ಬಿಟ್ಟುಕೊಂಡ ಟೊಮೆಟೊ ಮಿಶ್ರಣ, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿಸೊಪ್ಪು, ಈರುಳ್ಳಿ ಜೀರಿಗೆ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಅರ್ಧ ಗಂಟೆ ಈ ಹಿಟ್ಟಿನ ಮಿಶ್ರಣವನ್ನು ಹಾಗೆ ಬಿಡಿ.
ನಂತರ ದೋಸೆ ಹಿಟ್ಟಿನ ಹದಕ್ಕೆ ಹಿಟ್ಟನ್ನು ಕಲಸಿ. ಈಗ ತವಾದ ಮೇಲೆ ಎಣ್ಣೆ ಸವರಿ ದೋಸೆ ಹೊಯ್ಯಿರಿ. ಎರಡೂ ಕಡೆ ಹೊಂಬಣ್ಣಕ್ಕೆ ತಿರುಗುವವರೆಗೆ ಬೇಯಿಸಿಕೊಳ್ಳಿ. ಈಗ ರುಚಿಯಾದ ಬಿಸಿ ಬಿಸಿ ಟೊಮೆಟೊ ದೋಸೆಯನ್ನು ಚಟ್ನಿ ಜೊತೆ ಸವಿಯಿರಿ.
ಕೆಂಪು ತರಕಾರಿ ದೋಸೆ
ಬೇಕಾಗುವ ಪದಾರ್ಥಗಳು
ದೋಸೆ ಹಿಟ್ಟು 1 ಪಾತ್ರೆ
ಚಿರೋಟಿ ರವಾ 2 ಚಮಚ
ಅಕ್ಕಿ ಹಿಟ್ಟು 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಕತ್ತರಿಸಿದ ಕೊತ್ತಂಬರಿಸೊಪ್ಪು 2 ಟೀಸ್ಪೂನ್
ಜೀರಿಗೆ 1 ಟೀಸ್ಪೂನ್
ಬೀಟ್ರೂಟ್ – 1
ಕ್ಯಾರೆಟ್ – 1
ಮೂಲಂಗಿ – 1
ಈರುಳ್ಳಿ – 2
ಕ್ಯಾಪ್ಸಿಕಂ – 1
ಹಸಿ ಮೆಣಸು – 15
ಶುಂಠಿ – 1/2 ಇಂಚು
ಸೌತೆಕಾಯಿ -1
ಮಾಡುವ ವಿಧಾನ
ಮೊದಲಿಗೆ ಬೀಟ್ರೂಟ್, ಕ್ಯಾರೆಟ್, ಮೂಲಂಗಿ, ಈರುಳ್ಳಿ, ಕ್ಯಾಪ್ಸಿಕಂ, ಸೌತೆಕಾಯಿಗಳನ್ನು ಚಿಕ್ಕದಾಗಿ ಕತ್ತರಿಸಿ. ನಂತರ ಹಸಿಮೆಣಸಿನಕಾಯಿ ಮತ್ತು ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿ ಎಲ್ಲವನ್ನೂ ಒಟ್ಟಿಗೆ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿ. ನಂತರ ಇದನ್ನು ದೋಸೆ ಹಿಟ್ಟಿಗೆ ಸೇರಿಸಿ. ಬಳಿಕ ಚಿರೋಟಿ ರವಾ, ಅಕ್ಕಿ ಹಿಟ್ಟು, ಕೊತ್ತಂಬರಿಸೊಪ್ಪು, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
ಈಗ ದೋಸೆ ಕಾವಲಿಯನ್ನು ಬಿಸಿ ಮಾಡಿ ಎಣ್ಣೆ ಸವರಿ. ದೋಸೆ ಹಿಟ್ಟನ್ನು ಹುಯ್ಯಿದು ಎರಡೂ ಕಡೆ ಎಣ್ಣೆ ಹಚ್ಚಿ ಕಾಯಿಸಿ. ರುಚಿಯಾದ ಕೆಂಪು ತರಕಾರಿ ದೋಸೆ ಸವಿಯಲು ಸಿದ್ಧವಾಗಿದೆ.
5 ಸಿಂಪಲ್ ಮತ್ತು ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!