ಶ್ರೀಲಂಕಾ ವಿರುದ್ಧದ ಕೊನೆಯ ಟಿ-20 ಪಂದ್ಯದಲ್ಲಿ ಕೆರಿಬಿಯನ್ ದೈತ್ಯ ಆ್ಯಂಡ್ರೂ ರಸೆಲ್ ಸುನಾಮಿ ರೀತಿಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ರಸೆಲ್ ಆಡಿದ 14 ಎಸೆತಗಳಲ್ಲಿ ಒಂದೇ ಒಂದು ಬೌಂಡರಿ ಬಾರಿಸಿದೆ 6 ಸಿಕ್ಸರ್ ಸಿಡಿಸಿ ಅಜೇಯ 40 ರನ್ ಚಚ್ಚಿ ತಂಡಕ್ಕೆ ಗೆಲುವು ತಂದಿಟ್ಟಿದ್ದಾರೆ. ನಿನ್ನೆ ಪಲ್ಲೆಕೆಲೆಯಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಲಂಕಾನ್ನರನ್ನು ಬಗ್ಗು ಬಡಿದು ಕೆರಿಬಿಯನ್ನರು 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದರು. ಎರಡು ಟಿ-20 ಪಂದ್ಯಗಳ ಪೈಕಿ ವೆಸ್ಟ್ ಇಂಡೀಸ್ ಎರಡನ್ನೂ ಗೆದ್ದು ಸರಣಿ ವಶಪಡಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ಆರಂಭದಲ್ಲೇ ತನ್ನ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು. ಕುಸಲ್ ಪೆರೇರಾ 15, ಆವಿಷ್ಕಾ ಫೆರ್ನಾಂಡೊ 9, ಕುಸಲ್ ಮೆಂಡೀಸ್ 11 ರನ್ ಗಳಿಸಿ ಬೇಗನೆ ಔಟ್ ಆದರು. ಆದರೆ, ಡಸ್ಸನ್ ಶಂಕರ ಹಾಗೂ ಅನುಭವಿ ಆ್ಯಂಜಲೊ ಮ್ಯಾಥ್ಯೂಸ್ ಜೊತೆಗೂಡಿ ತಂಡದ ಮೊತ್ತವನ್ನು ಏರಿಸಿದರು. ಮ್ಯಾಥ್ಯೂಸ್ 23 ರನ್ ಗಳಿಸಿದರೆ, ಶಂಕರ 24 ಎಸೆತಗಳಲ್ಲಿ ಅಜೇಯ 31 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ತಿಸಾರ ಪರೇರಾ 13 ಎಸೆತಗಳಲ್ಲಿ ಅಜೇಯ 21 ರನ್ ಚಚ್ಚಿದರು. ಲಂಕಾ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು.
ಆದ್ರೆ 156 ರನ್ ಗಳ ಟಾರ್ಗೆಟ್ ವೆಸ್ಟ್ ಇಂಡೀಸ್ ಗೆ ದೊಡ್ಡ ಸವಾಲಾಗಿ ಪರಿಣಮಿಸಲಿಲ್ಲ. ಬಿಗ್ ಹಿಟ್ಟರ್ ಗಳಿಂದ ಕೂಡಿದ್ದ ಕೆರಿಬಿಯನ್ ತಂಡ ಈ ಗುರಿಯನ್ನು 17 ಓವರ್ನಲ್ಲೇ ಮುಟ್ಟಿತು.ಆ್ಯಂಡ್ರೂ ರಸೆಲ್ ಸ್ಫೋಟಕ ಬ್ಯಾಟಿಂಗ್ ಅನ್ನು ಕಟ್ಟಿ ಹಾಕಲು ಲಂಕಾನ್ನರು ವಿಫಲರಾದರು.