ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಫಘಾತ – 7 ಮಂದಿ ದಾರುಣ ಸಾವು
ಮದುವೆ ಸಂಭ್ರಮ ಮುಗಿಸಿ ಹಿಂದಿರುಗುವಾಗ ಹೆದ್ದಾರಿಯಲ್ಲಿ ಸಂಭವಿಸಿದ ಅಫಘಾತದಲ್ಲಿ ಒಂದೇ ಕುಟುಂಬದ 7 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಮುಂಜಾನೆ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದೆ.
ಕಾರಿನಲ್ಲಿ ಒಟ್ಟು 9 ಮಂದಿ ಪ್ರಯಾಣಿಸುತ್ತಿದ್ದರು ಇದರಲ್ಲಿ ಏಳು ಮಂದಿ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತರಲ್ಲಿ ವೃದ್ಧ ದಂಪತಿ, ಇಬ್ಬರು ಪುತ್ರರು, ಇಬ್ಬರು ಪತ್ನಿಯರು ಹಾಗೂ 6 ವರ್ಷದ ಮೊಮ್ಮಗ ಕೂಡ ಅಫಘಾತಕ್ಕೆ ಬಲಿಯಾಗಿದ್ದಾನೆ. ವೃದ್ಧ ದಂಪತಿಯ ಪುತ್ರ ಹಾಗೂ 3 ವರ್ಷದ ಮೊಮ್ಮಗ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರೆಲ್ಲರೂ ಹರ್ದೋಯ್‌ನ ಸಂದಿಲಾ ಪ್ರದೇಶದ ನಿವಾಸಿಗಳಾಗಿದ್ದರು. ಪ್ರಸ್ತುತ ನೋಯ್ಡಾದ ಸಡಕ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ವ್ಯಾಗನ್ ಆರ್ ಕಾರು ಎದುರಿನ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪೊಲೀಸರು ಆಗಮಿಸಿದಾಗ ಸ್ಥಳದಲ್ಲಿ ಬೇರೆ ವಾಹನ ಇರಲಿಲ್ಲ ಎಂದು ತಿಳಿದುಬಂದಿದೆ.
ಅಪಘಾತದ ಬಗ್ಗೆ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಚಾಲಕರೊಬ್ಬರು ಬೆಳಿಗ್ಗೆ ಡಯಲ್- 112 ಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರಿನಿಂದ ಶವಗಳನ್ನ ಹೊರತೆಗೆದಿದ್ದಾರೆ.