ಬೆಂಗಳೂರು : ದೇಶದೆಲ್ಲೆಡೆ 74ನೇ ಸ್ವಾತಂತ್ರ‍್ಯೋತ್ಸವ ಸಂಭ್ರಮ ಮನೆ ಮಾಡಿದೆ. ಕೊರೊನಾ ವೈರಸ್ ಸಂಕಷ್ಟದ ನಡುವೆ ದೇಶ ಸ್ವಾತಂತ್ರ‍್ಯೋತ್ಸವ ಸಂಭ್ರಮದಲ್ಲಿದ್ದು, ಎಲ್ಲೆಡೆ ತಿರಂಗಾ ರಾರಾಜಿಸುತ್ತಿದೆ. ರಾಜ್ಯದಲ್ಲೂ ಸಹ ಕೋವಿಡ್ ಮುನ್ನೆಚ್ಛರಿಕಾ ಕ್ರಮದೊಂದಿಗೆ ಸ್ವಾತಂತ್ರ‍್ಯ ಸಂಭ್ರಮದ ಸರಳ ಆಚರಣೆ ನಡೆಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ.
ಬಳಿಕ ಸಹೋದರ ಸಹೋದರಿಯರಿಗೆ 74 ವರ್ಷದ ಸ್ವಾತಂತ್ರ ದಿನದ ಶುಭಾಶಯ ಕೋರುತ್ತಿದ್ದೇನೆ ಎಂದು ಭಾಷಣ ಆರಂಭಿಸಿದ ಮುಖ್ಯಮಂತ್ರಿಗಳು, ಸ್ವಾತಂತ್ರಕ್ಕಾಗಿ ಹೋರಾಡಿ ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸಿದರು.
ನಂತರ ಸರ್ಕಾರದ ಸಾಧನೆಗಳ ಬಗ್ಗೆ ಹಾಗೂ ಸರ್ಕಾರದ ಮುಂದಿನ ಯೋಜನೆಗಳ ಬಗ್ಗೆ ಸಿಎಂ ವಿವರಿಸುತ್ತ, ಸವಾಲು ಎದುರಿಸುವಲ್ಲಿ ನಮ್ಮ ಸರ್ಕಾರ ಅಚಲವಾಗಿದೆ. ಒಂದು ವರ್ಷದಲ್ಲಿ ನಮಗೆ ಹಲವು ಸಮಸ್ಯೆಗಳ ನಡುವೆಯೂ ಅಭಿವೃದ್ಧಿ ಚಕ್ರ ಚಲಿಸಿದೆ. ನೆರೆ ಹಾಗೂ ಕರೊನಾವನ್ನು ಮೆಟ್ಟಿನಿಂತಿದ್ದೇವೆ. ಸಂಕಷ್ಟಕ್ಕೆ ಒಳಗಾದ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಕಾಯಕವೇ ಕೈಲಾಸ, ಸರ್ಕಾರದ ಕೆಲಸ ದೇವರ ಕೆಲಸ ಅನ್ನೋ ತತ್ವ ಪಾಲನೆ ಮಾಡ್ತಿದ್ದೇವೆ ಎಂದರು.
ಲಾಕ್ ಡೌನ್ ನಿಂದ ಆರ್ಥಿಕ ವ್ಯವಹಾರ ಕುಸಿತ ಕಂಡಿತು. ಅದೆಲ್ಲದವನ್ನ ದಿಟ್ಟವಾಗಿ ಎದುರಿಸಿ, ವಾಣಿಜ್ಯ ಚಟುವಟಿಕೆಗಳನ್ನು ಮತ್ತೆ ಚೇತರಿಕೆ ಮಾಡುವ ಕೆಲಸ ಮಾಡಿದ್ದೇವೆ. ಲಾಕ್ ಡೌನ್ ನಿಂದ ಅಸಂಘಟಿತ ನೆರವಿಗೆ ಸರ್ಕಾರ ಪರಿಹಾರ ನೀಡಿದೆ. ಮೂರು ಸಾವಿರ ಕೋಟಿ ಪರಿಹಾರ ನೀಡಿದ್ದೇವೆ ಎಂದ ಬಿಎಸ್ ವೈ, ಇದೇ ವೇಳೆ ಹಗಲಿರುಳು ಕೆಲಸ ಮಾಡಿದ ಕರೊನಾ ವಾರಿಯರ್ಸ್ ರನ್ನು ಸಿಎಂ ಸ್ಮರಿಸಿದರು. ಹಾಗೇ ಕೊರೊನಾ ಯೋಧರು ಮೃತಪಟ್ಟರೇ ಮೂವತ್ತು ಲಕ್ಷ ಪರಿಹಾರ ನೀಡುವುದಾಗಿ ಹೇಳಿದರು.
ಮುಂದುವರಿದು, ಗ್ರಾಮೀಣ ಭಾಗದಲ್ಲೂ ಆನ್ ಲೈನ್ ಶಿಕ್ಷಣ ಕೊಡಲು ಚಿಂತನೆ ನಡೆಸಿದ್ದೇವೆ. ವಿಧ್ಯಾಧನ ಯೋಜನೆ ಅಡಿಯಲ್ಲಿ ಶಿಕ್ಷಣ ನೀಡಲಾಗುವುದು. ರೈತನಿಗೆ ಕೇಂದ್ರ ಸರ್ಕಾರ ಆರು ಸಾವಿರ ರೂ. ಹಾಗೂ ರಾಜ್ಯ ಸರ್ಕಾರ ನಾಲ್ಕು ಸಾವಿರ ರೂ. ಕೊಡಲಿದೆ. ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತೊಗರಿ, ಜೋಳ ಖರೀದಿ ಮಾಡಿ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದೇವೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ರೈತರ ಕೆಲಸ ಮಾಡಿದ್ದೇವೆ. ಇದು ರೈತರಿಗೆ ಬೆಲೆ ಮತ್ತು ಅರ್ಥಿಕ ಸಬಲರಾಗಲು ಕಾರಣವಾಗಿದೆ. ಅಂತರ್ಜಲ ಮಟ್ಟ ಏರಿಕೆ ಮಾಡಲು ರೈತನ ಜತೆಗೆ ಕೆಲಸ ಮಾಡುತ್ತಿದ್ದೇವೆ ಎಂದು ಬಿಎಸ್ ವೈ ತಿಳಿಸಿದರು.
ಸಮಗ್ರ ಕರ್ನಾಟಕದ ಅಭಿವೃದ್ಧಿ ನಮ್ಮ ಧ್ಯೇಯ ಎಂದ ಸಿಎಂ, ಹೈದರಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಘೋಷಣೆ ಮಾಡಿದ್ದೇವೆ. ಆರೋಗ್ಯ ಮಿಷನ್ ಕ್ರಾಂತಿಕಾರಿಯಾಗಿದೆ. ಪ್ರತಿಯೊಬ್ಬರಿಗೂ ಹೆಲ್ತ್ ಕಾರ್ಡ್ ದೊರಕಿದೆ. ಕೇಂದ್ರ ಸರ್ಕಾರದ ಆತ್ಮಾ ನಿರ್ಭಾರ್ ಯೋಜನೆ ಭರವಸೆಯ ಹೊಂಗಿರಣವಾಗಿದೆ. ನಾವೀಗ ವಿಶ್ವದಲ್ಲೇ ಸರ್ವಶ್ರೇಷ್ಠರಾಗಿದ್ದೇವೆ ಎಂದರು.








