ಬಡವರಿಗೆ 5 ತಿಂಗಳು ಉಚಿತ ಅಕ್ಕಿ/ಗೋದಿ, ಬೇಳೆ ಕಾಳು ವಿತರಣೆ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಕೊರೊನಾ ಮಹಾಮಾರಿಯಿಂದ ಮಾಡಲಾದ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ದೇಶದ ಬಡವರಿಗೆ ನವೆಂಬರ್ ಅಂತ್ಯದವರೆಗೆ ಒಟ್ಟು ಐದು ತಿಂಗಳು ಉಚಿತ ಪಡಿತರ ಧಾನ್ಯ ವಿತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ದೇಶವನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಪ್ರತಿ ತಿಂಗಳು 5 ಕೆ.ಜಿ ಅಕ್ಕಿ ಅಥವಾ ಗೋದಿ, ಬೇಳೆ ಕಾಳು ಉಚಿತವಾಗಿ ನೀಡಲಾಗುವುದು. ಇದರಿಂದ 80 ಕೋಟಿ ಬಡವರಿಗೆ ಅನುಕೂಲವಾಗಲಿದೆ. ಹೀಗಾಗಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ನವೆಂಬರ್‍ವರೆಗೆ ವಿಸ್ತರಣೆ ಮಾಡಲಾಗುವುದು ಎಂದರು.
ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ದೀಪಾವಳಿ ಹಾಗೂ ಛಟ್ ಪೂಜಾ ಆಚರಣೆಗಳು ಬರಲಿವೆ. ಹಸಿವಿನಿಂದ ಯಾರೂ ಸಾಯಬಾರದು. ಹಬ್ಬದ ದಿನಗಳಲ್ಲಿ ಬಡತನದಿಂದಾಗಿ ಬಡವರು ಮನೆಯಲ್ಲಿ ಒಲೆ ಹಚ್ಚಲು ಆಗಿಲ್ಲ ಎಂಬಂತಾಗಬಾರದು. ಈ ಕಾರಣಕ್ಕಾಗಿ ಯೋಜನೆ ವಿಸ್ತರಣೆ ಮಾಡಿದ್ದೇವೆ ಎಂದರು.
ಲಾಕ್‍ಡೌನ್ ಅವಧಿಯಲ್ಲಿ 80 ಕೋಟಿಗೂ ಹೆಚ್ಚು ಬಡವರಿಗೆ 3 ತಿಂಗಳ ರೇಷನ್ ಕೊಟ್ಟಿದ್ದೇವೆ. ಮುಂದಿನ 5 ತಿಂಗಳು ಉಚಿತ ಆಹಾರ ಧಾನ್ಯ ವಿತರಣೆ ಮಾಡುತ್ತೇವೆ. ಕೊರೊನಾ ಬಗ್ಗೆ ಜನರು ಆತಂಕ ಪಡುವುದು ಬೇಡ. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ನಾವು ಉತ್ತಮ ಮಟ್ಟದಲ್ಲಿದ್ದೇವೆ ಎಂದು ಪ್ರಧಾನಿ ತಿಳಿಸಿದರು.
ಇತರ ದೇಶಗಳಿಗೆ ಹೋಲಿಸಿದರೆ, ಕೋವಿಡ್-19 ವಿರುದ್ಧದ ಯುದ್ಧದಲ್ಲಿ ಭಾರತ ಇನ್ನೂ ಸ್ಥಿರ ಸ್ಥಿತಿಯಲ್ಲಿದೆ. ಸಮಯೋಚಿತ ನಿರ್ಧಾರಗಳು ಮತ್ತು ಕ್ರಮಗಳು ಉತ್ತಮ ಪಾತ್ರ ವಹಿಸಿವೆ. ಸರಿಯಾದ ಸಮಯದಲ್ಲಿ ಲಾಕ್‍ಡೌನ್ ಮಾಡಿದ ಹಿನ್ನೆಲೆಯಲ್ಲಿ ಲಕ್ಷಾಂತರ ಜನರ ಪ್ರಾಣ ಉಳಿದಿದೆ ಎಂದು ಪ್ರಧಾನಿ ಹೇಳಿದರು.
ಅನ್‍ಲಾಕ್-1 ರ ನಂತರ ಕೆಲವು ಜನರು ಬೇಜವಾಬ್ದಾರಿಯಿಂದ ವರ್ತಿಸಿದರು. ಈ ಸಮಯದಲ್ಲಿ ದಯವಿಟ್ಟು ಇನ್ನಷ್ಟು ಜಾಗರೂಕರಾಗಿರಬೇಕು. ದಯವಿಟ್ಟು ನಿಮ್ಮ ಸುರಕ್ಷಿತ ಕ್ರಮಗಳನ್ನು ಕೈಬಿಡಬೇಡಿ ಎಂದು ಪ್ರಧಾನಿ ಮೋದಿ ಜನರಿಗೆ ಮನವಿ ಮಾಡಿದರು.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This