8ನೇ ತರಗತಿ ಫೇಲಾದವನಿಂದ ಶಸ್ತ್ರಚಿಕಿತ್ಸೆ- ತಾಯಿ, ಮಗು ದುರ್ಮರಣ
ಉತ್ತರಪ್ರದೇಶ : ವೈದ್ಯೋ ನಾರಾಯಣ ಭವ ಅನ್ನುವ ಮಾತಿದೆ. ವೈದ್ಯರು ಜೀವ ಉಳಿಸುವ ಕೆಲಸ ಮಾಡ್ತಾರೆ. ಆದ್ರೆ ವೈದ್ಯರಾಗುವುದಕ್ಕೂ ಮುನ್ನ ಕಣ್ಣಿಗೆ ಎಣ್ಣೆ ಬಿಟ್ಟು ಕಷ್ಟ ಪಟ್ಟು ಓದಿ ಅದಕ್ಕೆ ಅರ್ಹತೆಯನ್ನೂ ಪಡೆದುಕೊಂಡಿರುತ್ತಾರೆ. ಆದ್ರೆ ಉತ್ತರಪ್ರದೇಶದ ಸುಲ್ತಾನ್ ಪುರದಲ್ಲಿ 8ನೇ ತರಗತಿ ಪಾಸಾಗಿರೋನೊಬ್ಬ ಸಿಸರೀನ್ ಮಾಡಿದ್ದು, ತಾಯಿ ಮಗುವಿನ ಜೀವ ತೆಗೆದಿರುವ ಘಟನೆ ನಡೆದಿದೆ.
ಸುಲ್ತಾನಪುರ ಜಿಲ್ಲೆಯ ಸೈನಿ ಗ್ರಾಮದ ನಿವಾಸಿ ಪೂನಮ್ ಹಾಗೂ ಆಕೆಯ ಮಗು ಮೃತಪಟ್ಟಿದ್ದು, ರಾಜೇಂದ್ರ ಶುಕ್ಲಾ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆಸ್ಪತ್ರೆ ಮಾಲೀಕ ರಾಜೇಶ್ ಸಹನಿಯನ್ನು ಕೂಡ ಅರೆಸ್ಟ್ ಮಾಡಿದ್ದಾರೆ.
ಮೃತ ಪೂನಂ ಪತಿ ರಾಜಾರಾಮ್ ಅವರು ಪತ್ನಿ ಹಾಗೂ ಮಗು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ದೂರನ್ನ ಆಧರಿಸಿ ಪೊಲೀಸರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಈ ಘಟನೆ ಬೆಳಕಿಗೆ ಬಂದಿದೆ.
ಪೂನಂಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಸಿಸರೀನ್ ಮಾಡಿಯೇ ಮಗುವನ್ನ ಹೊರತೆಗೆಯಬೇಕು ಎಂದು ಸಿಬ್ಬಂದಿ ತಿಳಿಸಿದ್ದಾರೆ. ಈ ವೇಳೆ ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರತೆಗೆಯುವಾಗ ತೀವ್ರ ರಕ್ತಸ್ರಾವವಾಗಿ ಪತ್ನಿ ಮೃತಪಟ್ಟಿದ್ದು, ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮಗು ಕೂಡ ಸಾವನ್ನಪ್ಪಿದೆ. ತನಿಖೆ ವೇಳೆ 8ನೇತರಗತಿ ಪಾಸಾಗಿದ್ದವ ಶಸ್ತ್ರ ಚಿಕಿತ್ಸೆ ಮಾಡಿರೋದಾಗಿ ಗೊತ್ತಾಗಿದೆ. ಹೀಗಾಗಿ ಆತನ ಜೊತೆಗೆ ಆಸ್ಪತ್ರೆ ಮಾಲೀಕನನ್ನ ಬಂಧಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.