ಭೋಪಾಲ್: ದೇವಸ್ಥಾನದ ಗೋಡೆ ಕುಸಿದ ಪರಿಣಾಮ 9 ಮಕ್ಕಳು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಸಾಗರ ಜಿಲ್ಲೆಯಲ್ಲಿ ನಡೆದಿದೆ.
ಸಾಗರ ಜಿಲ್ಲೆಯ ಶಹಪುರ್ ನಗರದ ಹರ್ದುಲ್ ಬಾಬಾ ಮಂದಿರದಲ್ಲಿ (Hardaul Baba temple) ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ಗೋಡೆ ಕುಸಿದಿದೆ ಎನ್ನಲಾಗಿದೆ. ಪರಿಣಾಮ 9 ಜನ ಮಕ್ಕಳು ಸಾವನ್ನಪ್ಪಿದ್ದಾರೆ. ಅಲ್ಲದೇ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ. ನಂತರ ಗಾಯಾಗೊಂಡ ಮಕ್ಕಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾವನ್ನಪ್ಪಿದ ಮಕ್ಕಳು 10 ರಿಂದ 15 ವರ್ಷದೊಳಗಿನವರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಕುರಿತು ಸಂತಾಪ ಸೂಚಿಸಿರುವ ಸಿಎಂ ಮೋಹನ್ ಯಾದವ್, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ ಚಿಕಿತ್ಸಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಒಂದು ದಿನದ ಹಿಂದೆಯಷ್ಟೇ ಮನೆಯ ಗೋಡೆ ಕುಸಿದು 5 ರಿಂದ 7ನೇ ವಯಸ್ಸಿನ ನಾಲ್ಕು ಮಕ್ಕಳು ಸಾವನ್ನಪ್ಪಿದ್ದರು. ಗೋಡೆ ಕುಸಿದ ಮನೆ ಮಾಲೀಕನನ್ನು ಬಂಧಿಸಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಇಂತಹ ಘಟನೆ ನಡೆದಿದ್ದು, ರಾಜ್ಯದ ಜನರ ಕಂಬನಿ ಮಿಡಿಯುತ್ತಿದ್ದಾರೆ.